ಸಾವಿರಾರು ಸ್ವಯಂಸೇವಕರಿಂದ ಶಿಸ್ತುಬದ್ಧ ಹೆಜ್ಜೆ; ದಾರಿಯುದ್ದಕ್ಕೂ ಪುಷ್ಪಾರ್ಚನೆ ಮೂಲಕ ಸ್ವಾಗತ
ಬೆಳಗಾಯಿತು ವಾರ್ತೆ
ಬಳ್ಳಾರಿ: ವಿಜಯದಶಮಿ ಹಬ್ಬದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಗರ ಶಾಖೆಯ ಆಶ್ರಯದಲ್ಲಿ ಭಾನುವಾರ ಸಂಜೆ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಸಾವಿರಾರು ಸ್ವಯಂಸೇವಕರು ಗಣವೇಶ ಧರಿಸಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ಪಥ ಸಂಚಲನ ಸಾಗಿದ ಮಾರ್ಗದುದ್ದಕ್ಕೂ ಸ್ಥಳೀಯರು ತಳಿರು ತೋರಣ, ರಂಗೋಲಿ ಹಾಗೂ ಪುಷ್ಪಾರ್ಚನೆ ಮೂಲಕ ಸ್ವಯಂಸೇವಕರನ್ನು ಸ್ವಾಗತಿಸಿದರು. ಈ ವೇಳೆ ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಮೊಳಗಿದವು.
ನಗರದ ಕಪ್ಪಗಲ್ ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಿಂದ ಆರಂಭವಾದ ಪಥ ಸಂಚಲನ ಶ್ರೀ ಕನಕ ದುರ್ಗಮ್ಮ ದೇವಿ ದೇವಸ್ಥಾನ, ರಾಯಲ್ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಪೊಲೀಸ್ ಠಾಣೆ ಹಾಗೂ ಪ್ರಭಾತ್ ಟಾಕೀಸ್ ರಸ್ತೆಯ ಮೂಲಕ ಸಾಗಿತು. ಸುಮಾರು ಮೂರು ಕಿ.ಮೀ. ಕ್ರಮಿಸಿದ ಪಥ ಸಂಚಲನ ಕೊಟ್ಟೂರು ಸ್ವಾಮಿ ಮಠ ತಲುಪಿತು.
ಪಥ ಸಂಚಲನದಲ್ಲಿ ಆರ್‌ಎಸ್‌ಎಸ್ ಪ್ರಮುಖರಾದ ಪ್ರಸನ್ನ ಜೀ, ಬಾಗ್ರೆಚಾ ಜೀ, ನಗರ ಪ್ರಮುಖ್ ಜಗದೀಶ್ ತೆಕ್ಕಲಕೋಟೆ, ಭರತ್ ಸೋನಿ, ಶಶಿಕಾಂತ್ ಜೀ, ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಬುಡ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಪಾಲಿಕೆ ಸದಸ್ಯರಾದ ಮಲ್ಲನಗೌಡ, ವೇಮಣ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರಶೇಖರ ರೆಡ್ಡಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಸಂಘದ ಪ್ರಮುಖರು ಭಾಗವಹಿಸಿದ್ದರು





