ವಿಕಲಚೇತನರ ಬದುಕಿಗೆ ಹೊಸ ಭರವಸೆ ತುಂಬುವ ಮಾನವೀಯ ಕಾರ್ಯ: ಬಿ. ಶ್ರೀರಾಮುಲು

ಬೆಳಗಾಯಿತು ವಾರ್ತೆ
ಬಳ್ಳಾರಿ: ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಕೈ-ಕಾಲು ಕಳೆದುಕೊಂಡು ಸಂಕಷ್ಟದ ಜೀವನ ನಡೆಸುತ್ತಿರುವ ವಿಕಲಚೇತನರಿಗೆ ನೆರವಾಗುವ ಉದ್ದೇಶದಿಂದ ನಗರದ ಸನ್ಮಾರ್ಗ ಗೆಳೆಯರ ಬಳಗ ಹಾಗೂ ರಾಜಸ್ಥಾನದ ಉದಯಪುರದ ನಾರಾಯಣ ಸೇವಾ ಸಂಸ್ಥೆ ಸಹಯೋಗದಲ್ಲಿ ಬೃಹತ್ ಕೃತಕ ಕೈ-ಕಾಲು ಜೋಡಣೆ ಶಿಬಿರ ಆಯೋಜಿಸಲಾಗಿದೆ.

ನಗರದ ಸಿರುಗುಪ್ಪ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್‌ನಲ್ಲಿ ನಡೆಯುತ್ತಿರುವ ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ 700ಕ್ಕೂ ಅಧಿಕ ಫಲಾನುಭವಿಗಳು ಆಗಮಿಸಿದ್ದಾರೆ. ನಾರಾಯಣ ಸೇವಾ ಸಂಸ್ಥೆಯ ತಂಡವು ಫಲಾನುಭವಿಗಳಿಗೆ ಕೃತಕ ಅಂಗಗಳನ್ನು ಜೋಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, ಅಂಗವಿಕಲರ ಸೇವೆ ಅತ್ಯಂತ ಶ್ರೇಷ್ಠವಾದ ಮಾನವೀಯ ಕಾರ್ಯವಾಗಿದೆ. ದೈಹಿಕ ಅಂಗವೈಕಲ್ಯದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಕೃತಕ ಕೈ-ಕಾಲುಗಳನ್ನು ಜೋಡಿಸುವ ಮೂಲಕ ಆತ್ಮಸ್ಥೈರ್ಯ ತುಂಬಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಾಗುತ್ತಿದೆ ಎಂದು ಹೇಳಿದರು.

ಅಂಗವೈಕಲ್ಯ ಹೊಂದಿರುವವರು ಇತರರ ಮೇಲೆ ಅವಲಂಬಿತ ರಾಗದೆ, ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಸೇವಾ ಸಂಘಟನೆಗಳು ಮುಂದೆ ಬಂದು ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಕೃತಕ ಅಂಗಗಳ ಜೋಡಣೆ ಕೇವಲ ದೈಹಿಕ ನೆರವಲ್ಲ; ಅದು ಫಲಾನುಭವಿಗಳಲ್ಲಿ ಹೊಸ ಬದುಕಿನ ಭರವಸೆ ಮೂಡಿಸುವ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸನ್ಮಾರ್ಗ ಬಳಗದ ಸೇವೆಗೆ ಮೆಚ್ಚುಗೆ

ನಗರದ ಮೇಯರ್ ಪಿ. ಗಾದೆಪ್ಪ ಮಾತನಾಡಿ, ನೂರಾರು ವಿಕಲಚೇತನರಿಗೆ ಅಗತ್ಯವಿರುವ ಕೃತಕ ಕೈ-ಕಾಲುಗಳನ್ನು ಜೋಡಿಸಲು ಬೃಹತ್ ಶಿಬಿರ ಆಯೋಜಿಸುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಶ್ರಮಿಸಿದ್ದು, ಅವರ ಸೇವಾ ಮನೋಭಾವ ಇತರ ಸಂಘಟನೆಗಳಿಗೂ ಮಾದರಿಯಾಗಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ತಲುಪಿಸುವಲ್ಲಿ ಸ್ವಯಂಸೇವಾ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ನಾರಾಯಣ ಸೇವಾ ಸಂಸ್ಥೆಯ ಸಹಕಾರ
ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ಅಂಗವಿಕಲರ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಉದಯಪುರದ ನಾರಾಯಣ ಸೇವಾ ಸಂಸ್ಥೆಯ ಸೇವೆ ಅನುಕರಣೀಯವಾಗಿದೆ. ಬಳ್ಳಾರಿಯಲ್ಲಿ ಶಿಬಿರ ಆಯೋಜಿಸಲು ಸಹಕಾರ ನೀಡಿದ ಸಂಸ್ಥೆಯ ಮುಖ್ಯಸ್ಥೆ ವಂದನಾ ಹಾಗೂ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

ನೂರಾರು ವಿಕಲಚೇತನರಿಗೆ ನೆರವಾಗುವ ಉದ್ದೇಶದಿಂದ ಬಳಗದ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಿದ್ದು, ಸಂಸ್ಥೆಯ ಸಹಕಾರದಿಂದ ಈ ಮಾನವೀಯ ಕಾರ್ಯ ಸಾಧ್ಯವಾಗಿದೆ ಎಂದು ತಿಳಿಸಿದರು.

ಶಿಬಿರ ವೀಕ್ಷಿಸಿದ ಎಸ್ಪಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಬಿರಕ್ಕೆ ಭೇಟಿ ನೀಡಿ ಕೃತಕ ಕೈ-ಕಾಲು ಜೋಡಣೆ ಕಾರ್ಯವನ್ನು ವೀಕ್ಷಿಸಿದರು. ವಿಕಲಚೇತನರಿಗೆ ನೆರವಾಗಲು ಸನ್ಮಾರ್ಗ ಗೆಳೆಯರ ಬಳಗ ಕೈಗೊಂಡಿರುವ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಡಿವೈಎಸ್ಪಿ ಪ್ರಸಾದ ಗೋಖಲೆ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ವೆಂಕಟೇಶಮೂರ್ತಿ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಗುಡಿಗಂಟಿ, ಗೋವಿಂದರಾಜು, ಹನುಮಂತಪ್ಪ, ಸನ್ಮಾರ್ಗ ಗೆಳೆಯರ ಬಳಗದ ಪ್ರಮುಖರಾದ ಜಗದೀಶ್, ಹನುಮಂತರೆಡ್ಡಿ, ಚಂದ್ರಶೇಖರ ಆಚಾರ್ ಕಪ್ಪಗಲ್, ಅಶೋಕ್ ಭಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles