ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಕೇಂದ್ರ ಸರ್ಕಾರ ಆರಂಭಿಸಿರುವ ಜನಗಣತಿ ಅಭಿಯಾನದಲ್ಲಿ ನಗರದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಶುಕ್ರವಾರ ಮಧ್ಯಾಹ್ನ ನಗರದ 37ನೇ ವಾರ್ಡಿನ ದೇವಿ ನಗರದಲ್ಲಿ ಭೂಮಿ ಪೂಜೆ – ಸಲಾಂ ಬಳ್ಳಾರಿ ಹಾಗೂ ಮನೆ ಮನೆಗೂ ಭರತ್ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಹಾನಗರ ಪಾಲಿಕೆಯ ವತಿಯಿಂದ ಜನಗಣತಿಯ ಬಗ್ಗೆ ಪ್ರಚಾರ ನಡೆಯಲಿದೆ, ಪಾಲಿಕೆಯ ಅಧಿಕಾರಿಗಳು ಮನೆ ಮನೆಗೆ ಜನಗಣತಿ ಬಂದಾಗ ಜನರು ಸಹಕರಿಸಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.
ಎಲ್’ಪಿಜಿ ಪೂರೈಕೆ ಸಕ್ರಮಕ್ಕೆ ಸೂಚನೆ: ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ಸಂಘರ್ಷ ನಡೆಯುತ್ತಿದ್ದು, ಅಡುಗೆ ಅನಿಲ ಮತ್ತು ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ, ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಅನಿಲ ಪೂರೈಕೆಯಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲಿ ಅನಿಲ ಪೂರೈಕೆಯಲ್ಲಿ ಅಕ್ರಮ ಕಂಡು ಬಂದರೆ ಅಧಿಕಾರಿಗಳ ಹಾಗೂ ನನ್ನ ಗಮನಕ್ಕೆ ತರಬೇಕು ಎಂದರು.
ಎರಡು ಕಾಮಗಾರಿಗಳಿಗೆ ಭೂಮಿ ಪೂಜೆ: ವಾರ್ಡ್ ಸಂಖ್ಯೆ 37 ಹಾಗೂ 38ನೇ ವಾರ್ಡುಗಳಲ್ಲಿ ರಸ್ತೆ, ಮಳೆ ನೀರು ಚರಂಡಿ, ಒಳ ಚರಂಡಿ ಹಾಗೂ ಪೇವರ್ಸ್ ಅಳವಡಿಕೆ ಕಾಮಗಾರಿಗಳ ಎರಡು ಪ್ರತ್ಯೇಕ ಕಾಮಗಾರಿಗಳಿಗೆ ತಲಾ 2 ಕೋಟಿ ರೂ.ಗಳಂತೆ ಒಟ್ಟು 4 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದೇನೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಇಲ್ಲ: ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಸಂಬಂಧ ತುಂಗಭದ್ರಾ ಜಲಾಶಯದಿಂದ 400 ಕ್ಯೂಸೆಕ್ ನೀರನ್ನು ಕಾಲುವೆ ಮೂಲಕ ಕೆರೆಗೆ ತುಂಬಿಸಲು ಪ್ರಾದೇಶಿಕ ಆಯುಕ್ತರು ಆದೇಶ ಮಾಡಿದ್ದರೆ, ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗುವದಿಲ್ಲ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಶೀಘ್ರ ಆರಂಭಿಸಲಾಗುವುದು ಎಂದರು.
ಈ ಸಂದರ್ಭ ಪಾಲಿಕೆಯ ಆಯುಕ್ತ ಮಂಜುನಾಥ, 38ನೇ ವಾರ್ಡಿನ ಸದಸ್ಯ ಕುಬೇರ, 37ನೇ ವಾರ್ಡಿನ ಮುಖಂಡ ಮೊಹಮ್ಮದ್ ಭಾಯ್, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ಮಿಂಚು ಸೀನ, ಕಾಂಗ್ರೆಸ್ ಮುಖಂಡರಾದ ಪರುಶುರಾಮುಡು, ಲಾಲಸ್ವಾಮಿ, ಹೊನ್ನಪ್ಪ, ಹಗರಿ ಗೋವಿಂದ, ದೇವಿನಗರ ಹೊನ್ನೂರಪ್ಪ, ಪಿ.ರಾಜು, ಹಾವಭಾವಿ ಲೋಕೇಶ್, ಮುಕ್ಕಣ್ಣ, ಚರಣ್, ಥಿಯೇಟರ್ ಶಿವು, ಪೆದ್ದನ್ನ, ವಿಶ್ವನಾಥ, ಪದ್ಮಾ, ಹೊನ್ನೂರಸ್ವಾಮಿ ಮತ್ತಿತರರು ಹಾಜರಿದ್ದರು.





