ತುಂಗಭದ್ರಾ ಜಲಾಶಯ ಭಾಗದ ಕಾಲುವೆಗಳಿಗೆ ನವೆಂಬರ್ 30 ರವರಿಗೆ ನೀರು ಹರಿಸಲು ಮುಖ್ಯಮಂತ್ರಿಗಳಿಗೆ ಮನವಿ
ಬೆಳಗಾಯಿತು ವಾರ್ತೆ
ಬೆಂಗಳೂರು: ತುಂಗಭದ್ರಾ ಜಲಾಶಯ ಅವಲಂಬಿತ ಕಾಲುವೆಗಳ ಭಾಗದ ರೈತರು ಬೆಳೆದ ಬೆಳೆಗಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನವೆಂಬರ್ 30 ರವರಿಗೆ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಸಂಸದರು, ಸಚಿವರು, ಶಾಸಕರು,ವಿಧಾನಪರಿಷತ್ ಸದಸ್ಯರ ನೇತೃತ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬಿ. ನಾಗೇಂದ್ರ ರವರು ತಿಳಿಸಿದ್ದಾರೆ
ಅಕ್ಟೋಬರ್ 19 ರಂದು ನಡೆದ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್ 20ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು ಆದರೇ ಮಳೆಯ ಅಭಾವದಿಂದ ಕಟಾವು ಹಂತದಲ್ಲಿರುವ ರೈತರು ಬೆಳೆದ ಬೆಳೆಗಳಿಗೆ ಇನ್ನು ಹೆಚ್ಚುವರಿಯಾಗಿ 10 ದಿನಗಳ ಕಾಲ ನೀರು ಪೂರೈಕೆ ಮಾಡಿದರೆ ಭತ್ತ, ಜೋಳ, ಮೆಣಸಿನಕಾಯಿ ಬೆಳೆಗಳು ಸಂಪೂರ್ಣವಾಗಿ ಬೆಳೆ ಬಂದು ರೈತರಿಗೆ ಆರ್ಥಿಕವಾಗಿ ಪ್ರಗತಿ ಯಾಗುತ್ತದೆ ಮತ್ತು ಬೇಸಿಗೆ ತಿಂಗಳುಗಳಿಗೆ ನೀರು ಪೂರೈಕೆ ಮಾಡಲು ಕೆರೆಗಳಿಗೆ ನೀರು ಶೇಖರಣೆ ಮಾಡಲು ಸಹಕಾರಿಯಾಗುತ್ತದೆ ತಿಳಿಸಿದರು
ಈ ಸಂಧರ್ಭದಲ್ಲಿ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಚಿವರಾದ ಶಿವರಾಜ್ ತಂಗಡಗಿ, ವಸತಿ ಸಚಿವರಾದ ಬಿ. ಜೆಡ್. ಜಮೀರ್ ಅಹಮದ್ ಖಾನ್, ಶಾಸಕರಾದ ಹೆಚ್.ಆರ್. ಗವಿಯಪ್ಪ, ಹಂಪನಗೌಡ ಬಾದರ್ಲಿ, ಬಿ.ಎಂ. ನಾಗರಾಜ್,ಬಸನಗೌಡ ತುರ್ವಿಹಾಳ್, ಬಸವನಗೌಡ ಬಾದರ್ಲಿ, ತುಂಗಭದ್ರಾ ರೈತ ಸಂಘದ ಅಧ್ಯಕ್ಷರಾದ ದರೂರು ಪುರುಷೋತ್ತಮ್ ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು





