ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಟಿಪ್ಪರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಬ್ಬು (18) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ರಾತ್ರಿ ಹಗಲೆನ್ನದೆ ಮೈನ್ಸ್ ಟಿಪ್ಪರ್ಗಳ ಸಂಚಾರ ಹೆಚ್ಚಾಗಿದ್ದು, ಪ್ರತಿದಿನ 200ಕ್ಕೂ ಹೆಚ್ಚು ಟಿಪ್ಪರ್ಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿವೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸ್ಥಳೀಯ ಮುಖಂಡ ಸರಗು ನಾಗರಾಜ್, ರೇಡಿಯೋ ಪಾರ್ಕ್ ಜನವಸತಿ ಪ್ರದೇಶವಾಗಿದ್ದು, ಟಿಪ್ಪರ್ಗಳ ಅತಿಯಾದ ಸಂಚಾರದಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಟಿಪ್ಪರ್ಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜ್, ಇಂತಹ ಅಪಘಾತಗಳು ಮರುಕಳಿಸದಂತೆ ತಡೆಯಲು ನಾಳೆ ಬೆಳಿಗ್ಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಟಿಪ್ಪರ್ಗಳ ಅತಿಯಾದ ಸಂಚಾರಕ್ಕೆ ಕಡಿವಾಣ ಹಾಕಿ, ಜನರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.





