ಮಕ್ಕಳ ಸುರಕ್ಷತೆಗೆ ‘ಪೋಕ್ಸೋ’ ಕಾಯ್ದೆ ರಕ್ಷಾಕವಚ




ಬಳ್ಳಾರಿಯ ವಾರ್ಡ್ಲಾ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಕುರಿತು ‘ಸುರಕ್ಷಿತ ಬಚಪನ್ ಅಭಿಯಾನ’ ಜಾಗೃತಿ ಕಾರ್ಯಕ್ರಮ
ಬೆಳಗಾಯಿತು ವಾರ್ತೆ
ಬಳ್ಳಾರಿ:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ‘ಪೋಕ್ಸೋ’ ಕಾಯ್ದೆಯು ಬಲಿಷ್ಠ ರಕ್ಷಾಕವಚವಾಗಿದೆ ಎಂದು ಬಳ್ಳಾರಿಯ ಎಫ್.ಟಿ.ಎಸ್-I (ಪೋಕ್ಸೋ) ನ್ಯಾಯಾಲಯದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಘವೇಂದ್ರ ಗೌಡ ಬಿ.ಜಿ. ಅವರು ಹೇಳಿದರು.

ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಪೋಕ್ಸೋ ಕಾಯ್ದೆ-2012 ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಗರದ ಕಾಳಮ್ಮ ಬೀದಿಯಲ್ಲಿರುವ ವಾರ್ಡ್ಲಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಸುರಕ್ಷಿತ ಬಚಪನ್ ಅಭಿಯಾನ’ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

18 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಬ್ಬರೂ ಪೋಕ್ಸೋ ಕಾಯ್ದೆಯ ವ್ಯಾಪ್ತಿಗೆ ಬರುತ್ತಾರೆ. ಮಕ್ಕಳ ಮೇಲೆ ನಡೆಯುವ ದೈಹಿಕ, ಮಾನಸಿಕ ಅಥವಾ ಮೌಖಿಕ ಕಿರುಕುಳ, ಅನುಚಿತ ಸ್ಪರ್ಶ ಹಾಗೂ ಆನ್‌ಲೈನ್ ಮೂಲಕ ನಡೆಯುವ ದೌರ್ಜನ್ಯಗಳು ಈ ಕಾಯ್ದೆಯಡಿ ಗಂಭೀರ ಅಪರಾಧಗಳಾಗಿವೆ. ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಮಾತನಾಡಿ, ಮಕ್ಕಳ ಹಕ್ಕುಗಳು, ಅವರ ಸುರಕ್ಷತೆ ಹಾಗೂ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬರುವ ಲೈಂಗಿಕ ದೌರ್ಜನ್ಯ ತಡೆ ಕುರಿತು ದೇಶದಾದ್ಯಂತ ಒಂದು ವಾರದ ವಿಶೇಷ ಜಾಗೃತಿ ಅಭಿಯಾನ ನಡೆಯುತ್ತಿದೆ. ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯೂ ಮಗುವಾಗಿದ್ದು, ಅವರು ಸ್ವತಂತ್ರವಾಗಿ ತಮ್ಮ ಭವಿಷ್ಯ ಹಾಗೂ ಶಾರೀರಿಕ ವಿಚಾರಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಶಕ್ತರಾಗುವವರೆಗೂ ಅವರನ್ನು ಮಕ್ಕಳಂತೆಯೇ ಪರಿಗಣಿಸಿ ಸೂಕ್ತ ರಕ್ಷಣೆ ಒದಗಿಸುವುದು ಕಾನೂನಿನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲ್ಯವಿವಾಹ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇವುಗಳನ್ನು ತಡೆಯಲು ಎಲ್ಲಾ ಇಲಾಖೆಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದರು.

ಮಕ್ಕಳ ಸುರಕ್ಷತೆ ಕೇವಲ ಸಮಾಜದ ಹೊರಭಾಗಕ್ಕೆ ಸೀಮಿತವಾಗಿರದೆ, ಮುಖ್ಯವಾಗಿ ಅವರು ಅತಿ ಹೆಚ್ಚು ಸಮಯ ಕಳೆಯುವ ಮನೆ ಮತ್ತು ಶಾಲೆಗಳಿಂದಲೇ ಆರಂಭವಾಗಬೇಕಿದೆ. ಅಪರಿಚಿತರು ಮಾತ್ರವಲ್ಲದೆ, ಕೆಲವೊಮ್ಮೆ ಪರಿಚಿತರು ಮತ್ತು ಮನೆಯವರಿಂದಲೇ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಆತಂಕಕಾರಿ ಸನ್ನಿವೇಶಗಳಿದ್ದು, ಪೋಷಕರು ಮತ್ತು ಶಿಕ್ಷಕರು ಜಾಗರೂಕರಾಗಿರುವುದು ಅನಿವಾರ್ಯವಾಗಿದೆ. ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ ಅವರ ಮೂಲಭೂತ ಹಕ್ಕಾಗಿದ್ದು, ಅವರ ಉಜ್ವಲ ಭವಿಷ್ಯಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ತಿಳಿಸಿದರು.

ಬಳ್ಳಾರಿ ನಗರ ಡಿ.ವೈ.ಎಸ್.ಪಿ. ಗೋವಿಂದ್ ರಾಜು ಅವರು ಮಾತನಾಡಿ, ಪ್ರಸ್ತುತದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇದಕ್ಕೆ ಮುಖ್ಯವಾಗಿ ಕೂಲಿ ಕಾರ್ಮಿಕರ ಕುಟುಂಬಗಳಲ್ಲಿ ಹೆಣ್ಣುಮಕ್ಕಳನ್ನು ಬೇಗನೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಪ್ರವೃತ್ತಿ, ಬಾಲ್ಯವಿವಾಹ ಹಾಗೂ ಕೌಟುಂಬಿಕ ಒತ್ತಡಗಳು, ಹದಿಹರೆಯದ ಆಕರ್ಷಣೆ/ಪ್ರೇಮಕ್ಕೆ ಒಳಗಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ದೈಹಿಕ ಸಂಪರ್ಕ ಬೆಳೆಸಿಕೊಳ್ಳುವುದು, ಹಾರ್ಮೋನ್‌ಗಳ ಬದಲಾವಣೆ ಮತ್ತು ಸಾಮಾಜಿಕ ದುಷ್ಟ ಶಕ್ತಿಗಳ ಕೆಟ್ಟ ಪ್ರಭಾವದಿಂದ ಮಕ್ಕಳು ಶೋಷಣೆಗೆ ಒಳಗಾಗುತ್ತಿರುವುದು ಕಾರಣವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿನಿಯರು ಅಥವಾ ಮಕ್ಕಳು ಯಾವುದೇ ರೀತಿಯ ಲೈಂಗಿಕ ಕಿರುಕುಳ, ಬಲವಂತ, ಕೌಟುಂಬಿಕ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಅಥವಾ ಇತರ ಅಪಾಯಕ್ಕೆ ಸಿಲುಕಿದಾಗ ತಕ್ಷಣವೇ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಬೇಕು. ಈ ಕರೆ ಸಂಪೂರ್ಣ ಉಚಿತವಾಗಿರುತ್ತದೆ. ಕರೆ ಮಾಡಿದ ತಕ್ಷಣ ಲೊಕೇಶನ್ ಪತ್ತೆಹಚ್ಚಿ 10 ರಿಂದ 15 ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣೆ ನೀಡುತ್ತಾರೆ. ಇದರೊಂದಿಗೆ ಮಹಿಳಾ ಸಹಾಯವಾಣಿ ಮತ್ತು ಮಕ್ಕಳ ಸಹಾಯವಾಣಿ 1098 ಗಳ ಸೌಲಭ್ಯವೂ ಲಭ್ಯವಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ. ತ್ರಿವೇಣಿ ಪತ್ತಾರ್, ವಿಶೇಷ ಮಕ್ಕಳ ಪೊಲೀಸ್ ಘಟಕದ ಲಲಿತಮ್ಮ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ್ ಅವರು, ಮಕ್ಕಳಿಗೆ ಕಾನೂನು ಮತ್ತು ಸುರಕ್ಷತೆಯ ಬಗ್ಗೆ ಉಪನ್ಯಾಸ ವಿಶೇಷ ನೀಡಿದರು.

ಕಾರ್ಯಕ್ರಮದಲ್ಲಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಸ್ತೂರಿ ಡಿ., ಕಾರ್ಮಿಕ ಇಲಾಖೆಯ ರಮೇಶ್ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರಾದ ದೋರ್ಕ ಬಾಯಿ ಸೇರಿದಂತೆ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles