ಬಳ್ಳಾರಿ: ಸೆ.8 ರಂದು ಬಿಜೆಪಿ ಪಕ್ಷದ ರೈತ ಮೋರ್ಚಾ ವತಿಯಿಂದ ರೈತಪರ ಯೋಜನೆಗಳ ಮುಂದುವರಿಕೆ ಮತ್ತು ಸಮರ್ಪಕ ವಿದ್ಯುತ್ ಕೊಡಲು ಆಗ್ರಹಿಸಿ ರಾಜ್ಯದ ಎಲ್ಲಾ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸೇರಿ ರಾಜ್ಯಾದ್ಯಂತ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಶ್ರೀರಾಮುಲು ಅವರು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಮತ್ತು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಘೋಷಿಸಿದಂತೆ 136 ಬರ ಪೀಡಿತ ತಾಲ್ಲೂಕು ಎಂದು ಮುಂದಿನ ವಾರ ಘೋಷಿಸುತ್ತೇವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ನಿಯಮಾವಳಿಗಳ ಕುಂಟು ನೆಪವೊಡ್ಡಿ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡದೇ ಇರುವುದು ಸರಿಯಲ್ಲ
ಕೂಡಲೇ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಮಂತ್ರಿಗಳು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿ,ಬರ ಪೀಡಿತ ತಾಲೂಕುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷ ಲಾಟರಿ ಸರ್ಕಾರ ಇದ್ದಂತೆ ಮುಖ್ಯಮಂತ್ರಿ, ಸಚಿವರು, ಶಾಸಕರು ಎಲ್ಲಾರೂ ಲಾಟರಿ ಮೂಲಕ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಮೂಲಕ ಆಯ್ಕೆಯಾಗಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವೈ ಎಂ ಸತೀಶ್,ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಜಿಲ್ಲಾ ಅಧ್ಯಕ್ಷರಾದ ಮುರಹರಿ ಗೌಡ, ಗುರುಲಿಂಗನಗೌಡ ಮಹಿಪಾಲ್, ಪ್ರಕಾಶ್ ಗೌಡ, ಸತ್ಯ ನಾರಾಯಣ ಸೇರಿದಂತೆ ಮತ್ತಿತರ ಇದ್ದರು.