ಬೆಳಗಾವಿ: ಮುಂದಿನ ವರ್ಷ ಪ್ಯಾರೀಸ್‌ನಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ಪದಕ ವಿಜೇತ ಸಾಮರ್ಥ್ಯವುಳ್ಳ ಪ್ಯಾರಾ ಕ್ರೀಡಾಪಟುಗಳನ್ನೊಳ ಗೊಂಡಂತೆ 75 ಕ್ರೀಡಾಪಟು ಗಳನ್ನು ರಾಜ್ಯದಲ್ಲಿ ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ವಿಧಾನಪರಿಷತ್ತಿನಲ್ಲಿ ಶುಕ್ರವಾರ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಸ್.ರುದ್ರೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ಯಾರೀಸ್‌ನಲ್ಲಿ ನಡೆಯುವ ಒಲಂಪಿಕ್ಸ್ನಲ್ಲಿ ಭಾಗವಹಿಸಲು ಸಹಾಯವಾಗುವಂತೆ ರಾಜ್ಯದ ಕ್ರೀಡಾಪಟುಗಳಿಗೆ 2021-22ನೇ ಸಾಲಿನಿಂದ ಅಮೃತ ಕ್ರೀಡಾ ದತ್ತು ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ. ಒಲಂಪಿಕ್ಸ್ ಸೇರಿದಂತೆ ಅಂತಾರಾಷ್ಟಿಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಪೋಷಿಸಿ, ಸಾಧನೆಗೆ ಅಗತ್ಯವಾದ ಬೆಂಬಲ ವ್ಯವಸ್ಥೆ ನೀಡುವುದು ಈ ಯೋಜನೆಯ ಗುರಿಯಾಗಿದೆ ಎಂದರು.
ಈ ಯೋಜನೆಯ ಫಲಾನುಭವಿಗಳಿಗೆ ತರಬೇತಿಗಾಗಿ, ಕ್ರೀಡಾ ವಿಜ್ಞಾನದ ಬೆಂಬಲ, ಪೌಷ್ಟಿಕ ಆಹಾರಕ್ಕಾಗಿ, ತರಬೇತಿಗೆ ಅಗತ್ಯವಿರುವ ಕ್ರೀಡಾ ಕಿಟ್ ಖರೀದಿಸಲು, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ದೈನಂದಿನ ಅಗತ್ಯಗಾಗಿ ಮತ್ತು ಇತರೆ ವೆಚ್ಚಗಳಿಗಾಗಿ ತಲಾ ರೂ. 10ಲಕ್ಷ ವಾರ್ಷಿಕ ಗರಿಷ್ಠ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.