ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಕನ್ನಡ ಕಂಠೀರವ ವರನಟ ಡಾ. ರಾಜಕುಮಾರ್ ಅವರ ಪುಣ್ಯಭೂಮಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ನಟ ಚೇತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ರಾಜ್ಯಾಧ್ಯಕ್ಷ ಎಸ್. ಸುರೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಡಾ. ರಾಜಕುಮಾರ್ ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ಅವರ ಸೇವೆ ಅಪಾರವಾಗಿದೆ.
ಮೈಸೂರು ರಾಜ್ಯದಿಂದ ಕರ್ನಾಟಕ ರಾಜ್ಯವಾಗಿ ವಿಸ್ತರಣೆಗೊಂಡ ಸಂದರ್ಭದಲ್ಲಿ ಕನ್ನಡ ಭಾಷೆಗೆ ಮಾನ್ಯತೆ ದೊರಕಿಸಲು ನಡೆದ ಗೋಕಾಕ್ ಚಳುವಳಿಯಲ್ಲಿ ಡಾ. ರಾಜಕುಮಾರ್ ಅವರು ನಾಯಕತ್ವ ವಹಿಸಿದ್ದರು. ಕನ್ನಡ ಭಾಷೆ ಮತ್ತು ನಾಡಿನ ಹಿತಕ್ಕಾಗಿ ಅವರು ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಇದಲ್ಲದೆ, ವಿವಿಧ ಸಂದರ್ಭಗಳಲ್ಲಿ ರಸಮಂಜರಿ ಕಾರ್ಯಕ್ರಮಗಳ ಮೂಲಕ ದುಬೈ ಕನ್ನಡ ಭವನ, ದೆಹಲಿ ಕನ್ನಡ ಭವನ ಹಾಗೂ ಕರ್ನಾಟಕ ಪೊಲೀಸ್ ನಿಧಿಗೆ ಆರ್ಥಿಕ ನೆರವು ನೀಡಿರುವುದನ್ನು ಅವರು ಸ್ಮರಿಸಿದರು.
ಇಂತಹ ಮಹಾನ್ ವ್ಯಕ್ತಿಯ ಪುಣ್ಯಭೂಮಿ ಕುರಿತು ಚೇತನ ನೀಡಿದ ಹೇಳಿಕೆ ಅಸಹನೀಯ ಮತ್ತು ಖಂಡನೀಯವಾಗಿದೆ ಎಂದು ಸುರೇಶ್ ಹೇಳಿದರು. ನಟ ಚೇತನ ಅವರ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಿದ್ದು, ಅವರ ವಿರುದ್ಧ ಸಂಪೂರ್ಣ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಟ ಚೇತನ ಅವರ ಹಿನ್ನೆಲೆಯನ್ನು ಪರಿಶೀಲಿಸಲು ವಿಶೇಷ ತಂಡ ರಚಿಸಿ, ಭಾರತೀಯ ದಂಡ ಸಂಹಿತೆಯಡಿ ಕ್ರಮ ಕೈಗೊಂಡು ಅವರನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನರಸಿಂಹರಾಜು, ಜಿಲ್ಲಾ ಯುವ ಘಟಕ ಅಧ್ಯಕ್ಷ ಅಪ್ಪು ಸಾಗರ್, ಅನಿಲ್, ಶರತ್, ಶ್ರೀರಾಮ್, ಶಾಹಿದ್, ಶೇಖ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





