ಬೆಳಗಾಯಿತು ವಾರ್ತೆ |WWW.belagayithu.in
ಹೂವಿನಹಡಗಲಿ: ದಿಗಂತದಲ್ಲಿ ಸೂರ್ಯ ಮರೆಯಾಗುವ ಸಮಯ, ಮೈಲಾರ ಡೆಂಕನಮರಡಿ ಸುತ್ತುವರಿಂದ ಲಕ್ಷಾಂತರ ಭಕ್ತರಿಗೆ ದೈವವಾಣಿ ಕೇಳಿಸಿಕೊಳ್ಳುವ ಕಾತುರ, ಗೊರವಯ್ಯನ ‘ಸದ್ದಲೇ…’ ಉದ್ಘಾರಕ್ಕೆ ಸ್ತಬ್ದಗೊಳ್ಳುವ ಜೀವ ಸಂಕುಲ, ಶುಭ್ರ ನೀಲಾಕಾಶ ದಿಟ್ಟಿಸಿ, ಕಾರ್ಣಿಕ ಉಕ್ತಿ ನುಡಿದ ಗೊರವಯ್ಯ ಸಂಪಾಯಿತಲೇ ಫರಾಕ್ ಎಂದು ಮೇಲಿಂದ ಜಿಗಿದರು. ನಾಡಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಅಸಂಖ್ಯ ಭಕ್ತಗಣದ ಮಧ್ಯೆ ಮೊಳಗಿದ ಮೈಲಾರಲಿಂಗೇಶ್ವರ ಕಾರ್ಣಿಕ ಮಹೋತ್ಸವದಲ್ಲಿ ಗೊರವಯ್ಯ ಶುಭ ನುಡಿಯನ್ನಾಡಿದರು.
ಕೆಲ ನಿಮಿಷಗಳಲ್ಲಿ ಮುಗಿದು ಹೋಗುವ ಈ ದೈವವಾಣಿ ನುಡಿಯುವ ಈ ಧಾರ್ಮಿಕ ಆಚರಣೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ, ಹೊರ ರಾಜ್ಯಗಳಿಂದ ಅಪಾರ ಭಕ್ತರು ಮೈಲಾರಕ್ಕೆ ಬಂದಿದ್ದು, ಸಾಗರೋಪಾದಿಯಲ್ಲಿ ಭಕ್ತರು ಸೇರಿದ್ದರು. ಮೈಲಾರ ಸುಕ್ಷೇತ್ರದಲ್ಲಿ ನಡೆಯುವ ಕಾರ್ಣಿಕ ಮಹೋತ್ಸವಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಭೂಲೋಕದಲ್ಲಿ ಈ ಹಿಂದೆ ರಾಕ್ಷಸರ ಉಪಟಳ ಹೆಚ್ಚಾದಾಗ ಸಾಕ್ಷಾತ್ ಶಿವನು ಮೈಲಾರಲಿಂಗನ ಅವತಾರವೆತ್ತಿ ಮೈಲಾರದ ಡೆಂಕನಮರಡಿಯಲ್ಲಿ ರಾಕ್ಷಸರ ಮರ್ದನ ಮಾಡಿದ್ದನೆಂಬ ಪ್ರತೀತಿ ಇದೆ. ಅದರ ವಿಜಯೋತ್ಸವದ ಸಂಕೇತವಾಗಿ ಪ್ರತಿವರ್ಷ ಕಾರ್ಣಿಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ಇಲ್ಲಿನ ಜನರ ನಂಬಿಕೆ.
ಗೂಡಾರ್ಥದಿoದ ಕೂಡಿರುವ ಸ್ವಾಮಿಯ ನುಡಿಯು ಭವಿಷ್ಯವಾಣಿ ಆಗಿರಲಿದೆ. ಕಾರ್ಣಿಕ ಉಕ್ತಿಯನ್ನು ಮಳೆ, ಬೆಳೆ, ರಾಜಕೀಯ, ವಾಣಿಜ್ಯ ಕ್ಷೇತ್ರಗಳ ಮೇಲೆ ತಾಳೆ ಹಾಕಿ ವಿಶ್ಲೇಷಿಸಲಾಗುತ್ತದೆ.
ಮೈಲಾರಲಿಂಗನ ಪರಂಪರೆ ದೇಶದಲ್ಲೇ ವಿಶಿಷ್ಟವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನಗಳಿದ್ದರೂ ತಾಲ್ಲೂಕಿನ ಮೈಲಾರ ಸುಕ್ಷೇತ್ರವೇ ಸ್ವಾಮಿಯ ಮೂಲ ನೆಲೆಯಾಗಿದೆ. ಕೋರಿ ಅಂಗಿ, ಕುಂಚಿಗೆ ತೊಟ್ಟು, ಒಂದು ಕೈಯಲ್ಲಿ ಡಮರುಗ, ಮತ್ತೊಂದು ಕೈಯಲ್ಲಿ ಭಂಡಾರದ ಬಟ್ಟಲು ಹಿಡಿದು ಧಾರ್ಮಿಕ ನೆಲೆಗಳನ್ನು ಹೊತ್ತು ತಿರುಗುವ ಗೊರವ ಪರಿವಾರವು ಮೈಲಾರ ಜಾತ್ರೆಯ ಕೇಂದ್ರ ಬಿಂದುವಾಗಿದ್ದಾರೆ. ಇವರು ಇಲ್ಲದಿದ್ದರೆ ಜಾತ್ರೆಯ ವಿಧಿ–ವಿಧಾನ, ಆಚರಣೆಗಳು ಪೂರ್ಣಗೊಳ್ಳುವುದಿಲ್ಲ.