ಬೆಳಗಾಯಿತು ವಾರ್ತೆ
ಬಳ್ಳಾರಿ: ಬೋಫೋರ್ಸ್ ಹಗರಣ ಇಂದಿಗೂ ಸಾಬೀತಾಗಿಲ್ಲ. ಆದರೆ ಬಿಜೆಪಿಯವರು 40 ಸಾವಿರ ಕೋಟಿಗೂ ಅಧಿಕ ರಫೇಲ್ ಹಗರಣ ಮಾಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ಬಳ್ಳಾರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರಿನಲ್ಲಿ ಇಟ್ಟಿಗೆ ಯಾತ್ರೆ, ರಥಯಾತ್ರೆ ನಡೆಸಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು. ರಾಮಮಂದಿರ ಟ್ರಸ್ಟ್ ನಿರ್ಮಾಣದಲ್ಲೂ ಅಕ್ರಮ ನಡೆದಿದೆ. ಇದರ ಹಿಂದೆ ಬಿಜೆಪಿ ಇದೆ ಎಂದು ದೂರಿದರು.
ದೇಶದ ಹಿತಕ್ಕಾಗಿ ಯುವಕರು ರಾಜೀವ್ ಗಾಂಧಿ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಒಗ್ಗೂಡಬೇಕು ಎಂದು ಅವರು ಕರೆ ನೀಡಿದರು.
ಹುಣಸೂರು ತಾಲ್ಲೂಕಿನ ಕಲ್ಲಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಸಮಾಧಿ ಸ್ಥಳ ಅಭಿವೃದ್ಧಿಯಾಗದೆ ನಿರ್ಲಕ್ಷ್ಯಕ್ಕೊಳಗಾಗಿದೆ. ಅಲ್ಲಿನ ಮನೆ ದುಸ್ಥಿತಿಯಲ್ಲಿದ್ದು, ಸೂಕ್ತ ಮೂಲಸೌಕರ್ಯವೂ ಇಲ್ಲ ಎಂದು ಉಗ್ರಪ್ಪ ಹೇಳಿದರು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅರಸು ಅವರ ಊರಿನ ಅಭಿವೃದ್ಧಿಗಾಗಿ ₹10 ಕೋಟಿ ಬಿಡುಗಡೆ ಮಾಡಲಾಗಿತ್ತು. ಸಮುದಾಯ ಭವನ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಣ ಬಳಕೆಯಾಗಿದ್ದರೂ, ಪ್ರಸ್ತುತ ರಸ್ತೆ ಸೇರಿದಂತೆ ಹಲವು ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ ಎಂದು ಹೇಳಿದರು.
ದೇವರಾಜ ಅರಸು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದರು.
ವಾಲ್ಮೀಕಿ ಹಗರಣ ಚರ್ಚಿಸಲಿ
ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಉಗ್ರಪ್ಪ, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದ ಬಗ್ಗೆ ಎಸ್ಐಟಿ ಮತ್ತು ಸಿಬಿಐ ಪ್ರತ್ಯೇಕ ತನಿಖೆ ನಡೆಸುತ್ತಿವೆ. ಈ ವಿಚಾರದಲ್ಲಿ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಬಿಜೆಪಿ ಪ್ರತಿಭಟನೆ ನಡೆಸುವುದನ್ನು ಬಿಟ್ಟು ವಾಲ್ಮೀಕಿ ಹಗರಣದ ಕುರಿತು ಸದನದಲ್ಲಿ ಚರ್ಚೆಗೆ ಬರಲಿ. ರಾಮಮಂದಿರ ವಿಚಾರದಲ್ಲಿ ಆರೋಪಿಗಳೆಂದು ಹೇಳಿದವರೇ ಬಳಿಕ ಕ್ಲೀನ್ಚಿಟ್ ನೀಡಿದ್ದಾರೆ. ಈ ಬಗ್ಗೆ ಚರ್ಚೆಗೆ ಬಿಜೆಪಿ ಏಕೆ ಸಿದ್ಧವಿಲ್ಲ ಎಂದು ಪ್ರಶ್ನಿಸಿದರು.
ಸದನಕ್ಕೆ ಹೋದ ಕೂಡಲೇ ಧರಣಿ ನಡೆಸುವುದು ಜನರು ಮೆಚ್ಚುವಂತಹ ನಡೆ ಅಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಮೊದಲು ಚರ್ಚೆಗೆ ಬರಬೇಕು. ಸಮರ್ಪಕ ಉತ್ತರ ಸಿಗದಿದ್ದರೆ ನಂತರ ಹೋರಾಟ ನಡೆಸಲಿ ಎಂದು ಉಗ್ರಪ್ಪ ಹೇಳಿದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧವೂ ಆರೋಪಗಳನ್ನು ಮಾಡಿದ ಅವರು, ಆರ್ಟಿಜಿಎಸ್ ಮೂಲಕ ಹಣ ಪಡೆದಿದ್ದೀರಾ ಎಂದು ಪ್ರಶ್ನಿಸಿದರು. ಬಿಡಿಎ ವಿಚಾರದಲ್ಲೂ ವಿರೋಧ ಪಕ್ಷದವರು ಹಗರಣ ಮಾಡಿದ್ದಾರೆ ಎಂದು ಆರೋಪಿಸಿದ ಉಗ್ರಪ್ಪ, ಬಿಜೆಪಿ ಸರ್ಕಾರಕ್ಕೆ ಡಿಕ್ಟೇಟ್ ಮಾಡುವ ಸ್ಥಿತಿಯಲ್ಲಿಲ್ಲ ಎಂದು ವಾಗ್ದಾಳಿ ನಡೆಸಿದರು.





