ಬಳ್ಳಾರಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸೆ. 24ರಂದು ನಡೆಸಿದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ನೀಡಿದ ಕಾರ್ಯಸೂಚಿಯಲ್ಲಿ ಕೆಲವು ಅಂಶಗಳನ್ನು ಬಿಟ್ಟು ತಮಗೆ ಬೇಕಾದವರಿಗೆ ಕೆಲವು ಅಂಶಗಳನ್ನು ಸೇರಿಸಿ ಅಜೆಂಡಾ ಪ್ರತಿ ನೀಡಿದ್ದು, ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಸದಸ್ಯರ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಜೀವ ಸದಸ್ಯ ಪಿ.ಎನ್ ಸುರೇಶ್ ಅವರು ದೂರಿದರು.
ನಗರದ ಬಾಲ ಹೋಟೆಲ್ ನಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಗೆ ನೀಡಿದ ಅಜೆಂಡಾದಲ್ಲಿ ಕೆಲವರಿಗೆ 9 ಅಂಶವಿರುವ ಪ್ರತಿ ನೀಡಿದರೆ ಇನ್ನು ಕೆಲವರಿಗೆ 8 ಅಂಶ ಇರುವ ಅಜೆಂಡಾ ಪ್ರತಿಯನ್ನು ನೀಡಿದ್ದಾರೆ.
ಇದರಲ್ಲಿ ಇರುವ 9 ಅಂಶ ಅಂದರೆ 2023-26ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡುವ ವಿಷಯ ಒಳಗೊಂಡಿದೆ. ಹಾಗಾಗಿ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸೆ.24ರಂದು ನಡೆದಿರುವ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಸೂಚಿ ನಡವಳಿಕೆ ರದ್ದುಗೊಳಿಸಿ ಸಭೆಯಲ್ಲಿ ಮಾಡಿರುವ ವಿಡಿಯೋ ವಶ ಪಡಿಸಿಕೊಂಡು ಪರಿಶೀಲಿಸಬೇಕು. ನಂತರ ಆಡಳಿತಾಧಿಕಾರಿಯನ್ನು ನೇಮಿಸಿ ಚುನಾವಣೆ ಮೂಲಕ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.