ಬೆಳಗಾಯಿತು ವಾರ್ತೆ |Www.belagayithu.in
ಬಳ್ಳಾರಿ: ಭಾರತ ಆ. 15 ರಂದು ಸ್ವಾತಂತ್ರ‍್ಯ ಪಡೆದರೆ, ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಗಳು ಸೆ.17ರಂದು ವಿಮೋಚನೆಗೊಂಡ ದಿನ. ಹಾಗಾಗಿ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿ ಆಚರಿಸಲಾಗುತ್ತಿದ್ದು, ಆಚರಣೆಯು ಹಬ್ಬದಂತಿರಬೇಕು, ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆ. 17 ಹೈದ್ರಾಬಾದ್ ನ ನಿಜಾಮರಿಂದ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳು ವಿಮುಕ್ತಿ ಪಡೆದ ದಿನವಾಗಿದ್ದು, ಇದನ್ನು ಸರ್ಕಾರದ ಸೂಚನೆಯಂತೆ ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿ ಆಚರಿಸಲಾಗುತ್ತಿದೆ. ಸೆ.17 ರಂದು ಬೆಳಿಗ್ಗೆ 09 ಗಂಟೆಗೆ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನ ಮೈದಾನದ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಮೋದ್, ಬಳ್ಳಾರಿ ನಗರ ಡಿವೈಎಸ್ಪಿ ನಂದಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





