ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮಂಜುನಾಥನಿಗೆ 15 ಸಾವಿರ ದಂಡ
ಬೆಳಗಾಯಿತು ವಾರ್ತೆ
ಬಳ್ಳಾರಿ: ಸಹೋದರನ ಮೇಲೆಯೇ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 6 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿ ಬಳ್ಳಾರಿಯ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ನಗರದ ಶಿವಲಿಂಗ ನಗರದಲ್ಲಿ 2025ರ ನವೆಂಬರ್ 29ರಂದು ರಾತ್ರಿ ಮಂಜುನಾಥ ಎಂಬಾತ ತನ್ನ ಸಹೋದರ ಶಾಂತಕುಮಾರ್ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಈ ಕುರಿತು ಶಾಂತಕುಮಾರ್ ನೀಡಿದ ದೂರಿನ ಮೇರೆಗೆ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 214/2025ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ನಗರ ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು ಹಾಗೂ ಬ್ರೂಸ್ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಟಿ. ಮಹಾಂತೇಶ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಜಿ. ಮಲ್ಲಿಕಾರ್ಜುನ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬಳ್ಳಾರಿಯ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಮಂಜುನಾಥ ಅಲಿಯಾಸ್ ಮಂಜು (41), ಶಿವಲಿಂಗ ನಗರ, ಬಳ್ಳಾರಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಲಕ್ಷ್ಮೀದೇವಿ ಅವರು ಸಾಕ್ಷಿಗಳ ವಿಚಾರಣೆ ನಡೆಸಿ, ನ್ಯಾಯಾಲಯದಲ್ಲಿ ಅಭಿಯೋಜನೆ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಬ್ರೂಸ್ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಶರ್ಮಾಸ್ ಹಾಗೂ ಸಚಿನ್ ರಾಮನಗೌಡ ಅವರು ತನಿಖೆಗೆ ಸಹಕರಿಸಿದ್ದರು. ರವಿಚಂದ್ರ ಪಿ.ಬಿ., ಮಂಜುನಾಥ್ ಕೆ. ಅವರು ನ್ಯಾಯಾಲಯದ ಕರ್ತವ್ಯ ನಿರ್ವಹಿಸಿದ್ದು, ಪೊಂಪಯ್ಯ ಅವರು ಪ್ರೋಸೆಸ್ ಕರ್ತವ್ಯ ನಿರ್ವಹಿಸಿದ್ದರು. ನ್ಯಾಯಾಲಯ ಮತ್ತು ಪ್ರೋಸೆಸ್ ಸಿಬ್ಬಂದಿ ಸಾಕ್ಷಿದಾರರನ್ನು ನಿಗದಿತ ದಿನಾಂಕದಂದು ಹಾಜರುಪಡಿಸಿ ವಿಚಾರಣೆಗೆ ಸಹಕರಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು ಮಾಹಿತಿ ನೀಡಿದ್ದಾರೆ.





