ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ನಗರದ ಹೊಸ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯ ವೇಳೆ ಮಾತನಾಡಿದ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಬಳ್ಳಾರಿ ಸಂಚಾಲಕ ಜಗದೀಶ್ ನೇಮಕಲ್, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಿಂದಲೂ ಉದ್ಯೋಗಾಕಾಂಕ್ಷಿಗಳು ನಿರಂತರವಾಗಿ ಮನವಿ ಪತ್ರ ಸಲ್ಲಿಸಿ ಹೋರಾಟ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಒಂದಲ್ಲೊಂದು ನೆಪ ಹೇಳಿ ಮುಂದೂಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಉದ್ಯೋಗದ ನಿರೀಕ್ಷೆಯಲ್ಲಿ ಕಾಯುತ್ತಿರುವ ಸಾವಿರಾರು ಯುವಕರನ್ನು ಸರ್ಕಾರ ನಿರಾಶೆಗೊಳಿಸುತ್ತಿದೆ. “ಅತೀ ಶೀಘ್ರದಲ್ಲಿ” ಎಂದು ಹೇಳುತ್ತಾ ಮೇ ತಿಂಗಳು ಬಂದರೂ ನೇಮಕಾತಿ ಪ್ರಕ್ರಿಯೆ ಆರಂಭಿಸದಿರುವುದು ಖಂಡನೀಯ ಎಂದು ಹೇಳಿದರು.
ಪಿ.ಸಿ. ಹೋಟ ಸಮಿತಿಯ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು, ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು ಹಾಗೂ ಕೆಪಿಎಸ್ಸಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು ಎಂಬ ಬೇಡಿಕೆಗಳನ್ನು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಉದ್ಯೋಗಾಕಾಂಕ್ಷಿಗಳಾದ ಪಂಪಾಪತಿ, ಗಾದಿಲಿಂಗ ವೆಂಕಟೇಶ್, ದಾದು, ಬಸವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.





