ಬೆಳಗಾಯಿತು ವಾರ್ತೆ | www.belagayithu.in
ಕೊಪ್ಪಳ : ಕಾಂಗ್ರೆಸ್ ಅಧಿನಾಯಕಿಯಿಂದಲೇ ನನ್ನನ್ನು ಏನು ಮಾಡೋಕೆ ಆಗಲಿಲ್ಲ, ಇನ್ನೂ ನೀನೇನು ಮಾಡ್ತೀಯಾ? ಎಂದು ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಸಚಿವ ಶಿವರಾಜ್ ತಂಗಡಗಿಗೆ ಪ್ರಶ್ನಿಸಿದ್ದಾರೆ. ಈ ಮೂಲಕ ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಗಣಿದಣಿ ಜನಾರ್ದನ ರೆಡ್ಡಿ ನಡುವೆ ಮಾತಿನ ಸಮರ ಮುಂದುವರಿದಿದೆ.
ಜನಾರ್ದನ ರೆಡ್ಡಿಯನ್ನು ಬೆತ್ತಲೆ ಮಾಡಿ ನಿಲ್ಲಿಸ್ತೀನಿ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಪ್ರತಿಕ್ರಿಯಿಸಿದ ಅವರು, ತಂಗಡಗಿ ನಿನ್ನ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕೈಯಲ್ಲಿಯೇ ನನ್ನನ್ನು ಏನು ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಅಧಿಕಾರಕ್ಕೆ ಬರುವುದಕ್ಕೆ ಆಗುತ್ತಿಲ್ಲ ಎಂದು ನನ್ನ 4 ವರ್ಷ ಜೈಲಲ್ಲಿಟ್ಟು ಅಧಿಕಾರಕ್ಕೆ ಬಂದಿದ್ದೀರಿ. ನಾಚಿಕೆಯಾಗಬೇಕು ನಿಮಗೆ, ಈಗ ಅಧಿಕಾರಕ್ಕೆ ಬನ್ನಿ, ಹೇಗೆ ಬರ್ತಿರೋ ನಾನು ನೋಡ್ತೀನಿ ಎಂದು ವಾಗ್ದಾಳಿ ನಡೆಸಿದರು.
ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ, ತಮಿಳುನಾಡಲ್ಲಿ ಕನಿಮೋಳಿ, ಅಮಿತ್ ಶಾ ಅವರನ್ನು ಜೈಲಿಗೆ ಹಾಕಿದ್ರಿ, ನಿಮಗೆ ನಾಚಿಕೆ ಇಲ್ಲ, ಅಧಿಕಾರಕ್ಕಾಗಿ 25 ರಿಂದ 30 ಕುಟುಂಬಗಳನ್ನು ಜೈಲಿಗೆ ಹಾಕಿ ನೀವು ಬೆತ್ತಲಾಗಿದ್ದೀರಿ ಎಂದು ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ನನ್ನನ್ನು ಬೆತ್ತಲೆ ಮಾಡ್ತೀವಿ ಎಂದು ಹೇಳುವ ಶಿವರಾಜ ತಂಗಡಗಿಯವರೇ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗುವಾಗ ಎಲ್ಲಿಗೆ ಹೋಗಿದ್ರಿ ಎಂದು ಪ್ರಶ್ನಿಸಿದ ಜನಾರ್ದನ ರೆಡ್ಡಿ, ನರೇಂದ್ರ ಮೋದಿ ಅಂದ್ರೆ ಶಿವರಾಜ ತಂಗಡಗಿಗೆ ಕಿವಿಯಲ್ಲಿ ಮುಳ್ಳು ಚುಚ್ಚಿದಂತೆ ಆಗುತ್ತದೆ. ಮೋದಿ ಮೋದಿ ಎಂದವರಿಗೆ ಕಪಾಳಕ್ಕೆ ಹೊಡಿರಿ ಅಂತಾ ಹೇಳ್ತಾರೆ ಎಂದರೆ ಅವರಿಗೆ ಎಷ್ಟು ತಲೆ ಕೆಟ್ಟಿರಬೇಕು ಎಂದರು.