ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಜಿಲ್ಲೆಯ ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಏಪ್ರಿಲ್ 21, 2026 ರಂದು ನೆಲ್ಲುಡಿ ಹೊಟಾಲ್ ಗ್ರಾಮದ ದೊಡ್ಡ ಕಾಲುವೆ ಹತ್ತಿರ ನಡೆದ ಈ ಕಾರ್ಯಾಚರಣೆಯಲ್ಲಿ, ಆದೋನಿ (ಆಂಧ್ರಪ್ರದೇಶ) ಮೂಲದ ಶೇಕ್ಷಾವಲಿ, ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿಗಳಾದ ವಿನೋದ್ ಮತ್ತು ಹಾಲದಾಳ್ ವೀರಭದ್ರ ಎಂಬವರು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಕುರುಗೋಡು ಪೊಲೀಸ್ ಠಾಣೆಯ ಪಿ.ಎಸ್.ಐ. ಸುಪ್ರೀತ್.ವಿ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಜಯಕುಮಾರ್, ರಾಜಶೇಖರ್, ಆಂಜಿನಿ ಹಾಗೂ ಬಿ. ವಿರುಪಾಕ್ಷ ಗೌಡ (ಆಹಾರ ನಿರೀಕ್ಷಕರು) ಜಂಟಿಯಾಗಿ ದಾಳಿ ನಡೆಸಿ, ಸುಮಾರು ₹87,300 ಮೌಲ್ಯದ 17.460 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಸಾಗಣೆಗೆ ಬಳಸಲಾಗುತ್ತಿದ್ದ ಇಚರ್ ಕಂಪನಿಯ ಮಿನಿ ಲಾರಿಯನ್ನು ಕೂಡ ಜಪ್ತಿ ಮಾಡಲಾಗಿದೆ.
ಬಂಧಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಕುರುಗೋಡು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 93/2026 ಅಡಿಯಲ್ಲಿ, ಅಗತ್ಯ ವಸ್ತುಗಳ ಕಾಯ್ದೆ (EC Act) ಸೆಕ್ಷನ್ 7, 3, 6(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.





