ಬೆಳಗಾಯಿತು ವಾರ್ತೆ |www.belagayithu.in
ಬೆಂಗಳೂರು: ಚುನಾವಣಾ ನೀತಿ ಸಂಹಿಂತೆ ಉಲ್ಲಂಘನೆ ಪ್ರಕರಣದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.ತಮ್ಮ ವಿರುದ್ಧ ದಾಖಲಾಗಿರುವ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದು ಪಡಿಸಬೇಕು ಎಂದು ಶ್ರೀರಾಮುಲು ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ವೇಳೆ ನ್ಯಾಯಮೂರ್ತಿಗಳು ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಎಷ್ಟು ಬಾರಿ ಹಾಜರಾಗಿದ್ದಾರೆ? ಎಷ್ಟು ಬಾರಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲರು, ನಾಲ್ಕು ಬಾರಿ ಸಮನ್ಸ್ ಜಾರಿಯಾಗಿದ್ದು, ಒಂದು ಬಾರಿಯೂ ಅರ್ಜಿದಾರರು ಹಾಜರಾಗಿಲ್ಲ ಎಂದು ಉತ್ತರಿಸಿದ್ದಾರೆ.ಈ ವೇಳೆ ನ್ಯಾಯಮೂರ್ತಿಗಳು, ಸಚಿವರಾಗಲಿ, ಮಾಜಿ ಸಚಿವರಾಗಲಿ, ಕೇಸ್ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು. ಮುಂದಿನ ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದಲ್ಲಿ ಬಂಧನಕ್ಕೆ ವಾರಂಟ್ ಹೊರಡಿಸಬೇಕಾಗುತ್ತದೆ ಎಂದು ಚಾಟಿ ಬೀಸಿದರು.
ಅನುಮತಿ ಪಡೆಯದೇ ಅಭ್ಯರ್ಥಿ ಪರ ಚುನಾವಣಾ ರ‍್ಯಾಲಿ ನಡೆಸಿದ ಆರೋಪವನ್ನು ಶ್ರೀರಾಮುಲು ಅವರು ಎದುರಿಸುತ್ತಿದ್ದಾರೆ. ಈ ಸಂಬಂಧ 2023ರ ಏ.28 ರಂದು ಚುನಾವಣಾ ಆಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.