ಬೆಳಗಾಯಿತು ವಾರ್ತೆ | Www.belagayithu.in
ಬಳ್ಳಾರಿ: ಜೀವ ಮತ್ತು ಜೀವನ ಅಮೂಲ್ಯವಾದುದು. ಹಾಗಾಗಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಹೇಳಿದರು.
ನಗರದ ಕನಕದುರ್ಗಮ್ಮ ದೇವಸ್ಥಾನ ವೃತ್ತದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಾರ್ವಜನಿಕರ ಸುರಕ್ಷತೆಗಾಗಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಮತ್ತು ಗುಲಾಬಿ ಹೂ ವಿತರಿಸಿ ಅವರು ಮಾತನಾಡಿದರು.
ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳ ಅಪಘಾತವೇ ಹೆಚ್ಚು. ಅದರಲ್ಲಿ ಹೆಲ್ಮೆಟ್ ಧರಿಸದೆ ಸಾವನಪ್ಪಿರುವರ ಸಂಖ್ಯೆ ಹೇರಳವಾಗಿದೆ. ಆ ವೇಳೆ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವವರು ಹೆಚ್ಚಾಗಿದ್ದಾರೆ. ಇದಕ್ಕೆ ಹೆಲ್ಮೆಟ್ ಧರಿಸದಿರುವುದೇ ಮುಖ್ಯ ಕಾರಣ. ಹಾಗಾಗಿ ನಿಮ್ಮ ಮನೆಯವರು ಹಾಗೂ ನಿಮ್ಮನ್ನು ನಂಬಿದವರಿಗಾಗಿ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಲೇಬೇಕು ಎಂದು ಹೇಳಿದರು.
ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದರಿಂದ ಸಂಭವನೀಯ ಅಪಘಾತಗಳಿಂದ ತಲೆಗೆ ಪೆಟ್ಟಾಗುವುವುದು ತಪ್ಪುತ್ತದೆ. ಪೊಲೀಸರು ನೀಡುವ ಸೂಚನೆಗಳನ್ನು ಅಗತ್ಯವಾಗಿ ಪಾಲಿಸಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಸ್ಥಳದಲ್ಲಿಯೇ ರೂ.500 ದಂಡ ತೆರಬೇಕಾಗುತ್ತದೆ. 18 ವರ್ಷದ ಒಳಗಿನವರು ವಾಹನ ಚಲಾಯಿಸುವುದು ಕೂಡ ಅಪರಾಧ. ಹಾಗಾಗಿ ಕಡ್ಡಾಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದರು.





