ಬೆಳಗಾಯಿತು ವಾರ್ತೆ
ಬಳ್ಳಾರಿ: ಪ್ರತಿ ಒಬ್ಬ ಬೈಕ್ ಸವಾರರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ಜತೆಗೆ ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸಬೇಕು ಇದರಿಂದ ಜೀವ ಹಾನಿ ತಪ್ಪಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಾನಹ ಸವಾರರು ತಮ್ಮ ಜೀವ ಉಳಿಸಿಕೊಳ್ಳಲು ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ ಕಡಿಮೆ. ಜನರು ಸಲಹೆ, ಸೂಚನೆಯನ್ನು ಪಾಲನೆ ಮಾಡಬೇಕಾಗುತ್ತದೆ. ಜಿಲ್ಲೆಯಲ್ಲಿ ಕಳೆದ ವರ್ಷ 194 ಜನರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಗಾಗಿ ಜೀವ ಬಹಳ ಮುಖ್ಯವಾದದು. ಅವರನ್ನು ನಂಬಿಕೊಂಡು ಅವರ ಕುಟುಂಬಗಳು ಬದುಕುತ್ತಿರುತ್ತವೆ. ಜೀವ ಕಳೆದುಕೊಂಡರೆ ಕುಟುಂಬದ ನಿರ್ವಹಣೆ ಕೂಡ ಕಷ್ಟವಾಗಲಿದೆ ಎಂದು ಸಲಹೆ ನೀಡಿದರು.
ಇಂದಿನ ಯುವ ಜನತೆಗೆ ಬೈಕ್ ಚಲಾಯಿಸುವುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿದೆ. ಆದರೆ ನಿಯಮ ಮೀರಿ ಬೈಕ್ ಓಡಿಸಿದರೆ ಅಪಘಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಾಗಿ ಸುರಕ್ಷಿತವಾಗಿ ಬೈಕ್ ಚಲಾಯಿಸಬೇಕು ಎಂದರು. ಬೈಕ್ ಜಾಥಾವೂ ಪೊಲೀಸ್ ಕವಾಯತು ಮೈದಾನದಿಂದ ಆರಂಭಗೊಂಡು ಸಂಗಂ ವೃತ್ತ, ರಾಯಲ್ ಸರ್ಕಲ್, ಮೋತಿ ವೃತ್ತ ಮಾರ್ಗವಾಗಿ ಸುಧಾಕ್ರಾಸ್ ತಲುಪಿ, ದುರ್ಗಮ್ಮ ದೇವಸ್ಥಾನ, ಜಿಲ್ಲಾ ನ್ಯಾಯಾಲಯದ ರಸ್ತೆ ಮಾರ್ಗವಾಗಿ ಮತ್ತೆ ಕವಾಯತು ಮೈದಾನಕ್ಕೆ ತಲುಪಿ ಸಂಪನ್ನಗೊಂಡಿತು. ಸ್ವತಃ ಎಸ್‌ಪಿ ಅವರು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕ ರ‍್ಯಾಲಿಗೆ ಮೆರಗು ನೀಡಿದರು. ಈ ವೇಳೆ ಇಲಾಖೆಯ ಪೊಲೀಸ್ ಸಿಬ್ಬಂದಿ ಶಿಸ್ತಿನಿಂದ ಹೆಲ್ಮೆಟ್ ಧರಿಸಿ ಬೈಕ್ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದರು. ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ನಟರಾಜ್, ಡಿವೈಎಸ್‌ಪಿ ಜಿ.ಎನ್.ತಿಪ್ಪೇಸ್ವಾಮಿ, ಶೇಖರಪ್ಪ, ಉಮಾರಾಣಿ, ಇನ್‌ಸ್ಪೆಕ್ಟರ್‌ಗಳಾದ ಗೋವಿಂದ್, ಸಿದ್ದರಾಮೇಶ್ವರ ಗಡೇದ, ಅಮೋಘ್ ಆರ್.ಪಿ, ಸುಭಾಸ್‌ಚಂದ್ರ, ಉಮೇಶ್, ನಾಗರಾಜ್ ಹಾಗೂ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ಇದ್ದರು.