ಬೆಳಗಾಯಿತು ವಾರ್ತೆ| www.belagayithu.in
ಬೆಂಗಳೂರು: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮೂರನೇ ಭಾಷಾ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 15ರಂದು ನೀಡಿದ್ದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಹೈಕೋರ್ಟ್ ಇಂದು ಮಂಗಳವಾರ ನಿರಾಕರಿಸಿದೆ. ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದ ಗ್ರೇಡಿಂಗ್ ಪದ್ಧತಿಗೆ ಬದಲಾವಣೆ ಮಾಡುವ ಬೇಡಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿ ತನ್ನ ಆದೇಶದ ಯಥಾಸ್ಥಿತಿ ಕಾಯ್ದುಕೊಂಡಿದೆ.
ನ್ಯಾಯಮೂರ್ತಿ ಇ.ಎಸ್. ಇಂಡಿರೇಶ್ ಅವರು, ಏಪ್ರಿಲ್ 15ರ ಆದೇಶವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವ ಮೂಲಕ ಈ ಆದೇಶ ನೀಡಿದ್ದಾರೆ.
ಪರೀಕ್ಷೆಗಳ ಪ್ರಕಟಣೆಗೂ ಮುನ್ನ ಜಾರಿಯಲ್ಲಿದ್ದ ನಿಯಮಾವಳಿಗಳ ಪ್ರಕಾರ ಮೌಲ್ಯಮಾಪನ ವ್ಯವಸ್ಥೆಯನ್ನು ಮುಂದುವರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅದರಿಂದ ವಿಮುಖರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
ಏಪ್ರಿಲ್ 15ರ ಆದೇಶದಲ್ಲಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು ಕೇಳಿದ್ದ ಕೆಲವು ತಿದ್ದುಪಡಿಗಳನ್ನು ಪರಿಗಣಿಸಿ, ಅಗತ್ಯ ನಿಯಮಗಳಿಗೆ ಕಾನೂನುಬದ್ಧ ತಿದ್ದುಪಡಿ ಮಾಡಿ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾದರೆ, ಅದಕ್ಕೆ ನ್ಯಾಯಾಲಯ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರವೇ 2025–26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಪರೀಕ್ಷಾ ಪ್ರಕಟಣೆ ದಿನಾಂಕದ ವೇಳೆಗೆ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ ನಡೆಸಲಾಗುತ್ತದೆ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ, ಏಪ್ರಿಲ್ 15ರಂದು ಹೈಕೋರ್ಟ್ ಅದನ್ನೇ ಅನುಸರಿಸಲು ನಿರ್ದೇಶನ ನೀಡಿತ್ತು.




