ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ/ವಿಜಯನಗರ: ಲಾರಿ ಚಾಲಕನ ಅಜಾಗರೂಕತೆಯಿಂದ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಐದಾರು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಹೊಸಪೇಟೆ ಹೊರವಲಯದ ಟನಲ್‌ನಿಂದ ಡಣಾಪುರದವರೆಗೆ ವೇಗವಾಗಿ ಸಾಗುತ್ತಿದ್ದ ಲಾರಿ, ಮೊದಲು ಎದುರಿಗೆ ಬಂದಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ಕಾರು ಹಾಗೂ ಸಾರಿಗೆ ಬಸ್‌ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಒಂದು ಕಾರು ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಘಟನೆಯ ತೀವ್ರತೆ ಎತ್ತಿಹಿಡಿದಿದೆ.
ಮೂಲಗಳ ಪ್ರಕಾರ, ಚಿತ್ರದುರ್ಗಕ್ಕೆ ಹೊರಟಿದ್ದ ಬೆಳ್ಳುಳ್ಳಿ ತುಂಬಿದ್ದ ಲಾರಿ ತಡವಾದ ಕಾರಣ ವೇಗವಾಗಿ ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬಿಎಂಎಂ ಫ್ಯಾಕ್ಟರಿ ಸಮೀಪ ಮೊದಲಿಗೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಚಾಲಕ, ಬಳಿಕ ತಪ್ಪಿಸಿಕೊಳ್ಳಲು ಯತ್ನಿಸುವಾಗ ಮತ್ತೊಂದು ಕಾರು ಮತ್ತು ಬಸ್‌ಗೆ ಗುದ್ದಿದ್ದಾನೆ.
ಬಸ್‌ಗೆ ಗುದ್ದಿದ ಪರಿಣಾಮ ಬಸ್‌ನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಕೆಲವರನ್ನು ಕೊಪ್ಪಳಕ್ಕೆ ರವಾನೆ ಮಾಡಲಾಗಿದ್ದು, ಉಳಿದವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಎಸ್ ಹಾಗೂ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ವಾಹನ ಚಾಲಕರ ಅಜಾಗರೂಕತೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






