ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಸಾರ್ವಜನಿಕರ ಪಾತ್ರ ಅತ್ಯಮೂಲ್ಯವಾಗಿದೆ. ಅದೇರೀತಿಯಾಗಿ ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಮತ್ತು ಚುನಾವಣಾ ಅಕ್ರಮ ತಡೆಯಲು ಭಾರತದ ಚುನಾವಣಾ ಆಯೋಗವು ಸಿ-ವಿಜಿಲ್ (C-Vigil) ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.
ಸಿ-ವಿಜಿಲ್ ಆಪ್ ಕಾರ್ಯ ಹೇಗೆ?
ಆಪ್ ಓಪನ್ ಮಾಡಿದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯ ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹಣ, ಮದ್ಯ, ಉಡುಗೊರೆಗಳನ್ನು ಹಂಚುವ ಸಂದರ್ಭದಲ್ಲಿ ಸಾರ್ವಜನಿಕರು ಪೋಟೋ ಮತ್ತು ವಿಡಿಯೋವನ್ನು (2 ನಿಮಿಷ) ಸೆರೆಹಿಡಿದು ಈ ಆಪ್‍ನಲ್ಲಿ ಅಪ್‍ಲೋಡ್ ಮಾಡಬಹುದು. ಅಲ್ಲಿನ ವಿಳಾಸವನ್ನು ನಮೂದಿಸಬೇಕು. ಜೊತೆಗೆ ಇದು ಸಂಪೂರ್ಣ ಉಚಿತವಾಗಿರಲಿದೆ.
ಏನೆಲ್ಲಾ ದೂರು ನೀಡಬಹುದು?
ವ್ಯಕ್ತಿಯೊಬ್ಬರು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಹಣ ವಿತರಣೆ ಮಾಡಿದರೆ, ಉಡುಗೋರೆ, ಮದ್ಯ ಹಂಚಿಕೆ, ಅನುಮತಿ ಪಡೆಯದೇ ಬ್ಯಾನರ್ ಅಥವಾ ಪೋಸ್ಟರ್, ಬೆದರಿಕೆ ಹಾಕುವುದು, ಬಂದೂಕು ಪ್ರದರ್ಶನ, ಧಾರ್ಮಿಕ ಅಥವಾ ಕೋಮು ಕುರಿತು ಪ್ರಚೋದಾರಿತ ಭಾಷಣ, ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧದ ಅವಧಿಯಲ್ಲೂ ಪ್ರಚಾರ, ಮತದಾನದ ದಿನದಂದು ಮತದಾರರನ್ನು ಸಾಗಿಸುವುದು.. ಹೀಗೆ ಯಾವುದೇ ರೀತಿ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಆಪ್‍ನಲ್ಲಿ ದೂರು ಕೊಡಬಹುದು. ಒಟ್ಟು 16 ರೀತಿಯ ದೂರುಗಳನ್ನು ನೀಡಬಹುದು.
ಆಪ್‍ನಲ್ಲಿ ದಾಖಲಿಸುವ ದೂರುಗಳ ಬಗ್ಗೆ ಜಿಲ್ಲಾ ಮಟ್ಟದ ಸಿ-ವಿಜಿಲ್ ನೋಡೆಲ್ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರ ದೂರುಗಳಿಗೆ 100 ನಿಮಿಷಗಳ ಒಳಗೆ ಅಧಿಕಾರಿಗಳ ಉತ್ತರ ಸಿಗಲಿದೆ.