ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಕೆಐಎಡಿಬಿ ವಶಪಡಿಸಿಕೊಂಡ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ಬಳಸದೆ ತುಂಡು ತುಂಡಾಗಿ ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡುತ್ತಿರುವುದನ್ನು ಖಂಡಿಸಿ ಕುಡುತಿನಿ ಭಾಗದ ಭೂಸಂತ್ರಸ್ಥ ರೈತರು ತೀವ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಮೇ 2ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಾಗೂ ಮುಂದಿನ ದಿನಗಳಲ್ಲಿ ಬಳ್ಳಾರಿ ಬಂದ್‌ಗೆ ಕರೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಟಿಸಿ ರಾಜ್ಯ ಉಪಾಧ್ಯಕ್ಷ ಸತ್ಯ ಬಾಬು ಮಾತನಾಡಿ, ಎನ್‌ಎಂಡಿಸಿ, ಉತ್ತಮ್ ಗಾಲ್ವ ಹಾಗೂ ಬ್ರಹ್ಮಿಣಿ ಸ್ಟೀಲ್ ಕೈಗಾರಿಕೆಗಳಿಗಾಗಿ ಕೆಐಎಡಿಬಿ ವಶಪಡಿಸಿಕೊಂಡ ಸುಮಾರು 12 ಸಾವಿರ ಎಕರೆ ಭೂಮಿಯನ್ನು ನಂತರ ಜಿಂದಾಲ್ ಸೇರಿದಂತೆ ಇತರ ಕಂಪನಿಗಳಿಗೆ ಹಂಚಿಕೆ ಮಾಡುತ್ತಿರುವುದು ಅನ್ಯಾಯಕರ ಎಂದು ಆರೋಪಿಸಿದರು.
ರೈತರಿಂದ ವಶಪಡಿಸಿಕೊಂಡ ಭೂಮಿಗೆ ಕೇವಲ 8 ರಿಂದ 12 ಲಕ್ಷ ರೂಪಾಯಿ ಪರಿಹಾರ ನೀಡಿದ ಸರ್ಕಾರ, ಅದೇ ಭೂಮಿಯನ್ನು ಕಂಪನಿಗಳಿಗೆ ಸುಮಾರು 28 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿರುವುದು ರೈತರ ಮೇಲೆ ದ್ರೋಹ ಎಂದರು. ಕೈಗಾರಿಕೆಗಳು ಸ್ಥಾಪನೆಯಾಗಿದ್ದರೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಬಹುದಾಗಿತ್ತು, ಆದರೆ ಅದನ್ನು ಕೈಬಿಟ್ಟು ರಿಯಲ್ ಎಸ್ಟೇಟ್ ರೀತಿಯಲ್ಲಿ ಭೂಮಿ ವ್ಯವಹಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಅನಂತ್ ಕುಮಾರ್, ಎಐಟಿಯುಸಿ ಮುಖಂಡ ಜಂಗ್ಲಿ ಸಾಬ್ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




