ಬೆಳಗಾಯಿತು ವಾರ್ತೆ
ಬಳ್ಳಾರಿ: ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ, ಕಾರ್ಮಿಕರ ಆಹಾರ, ಬಟ್ಟೆ ಮತ್ತು ವಸತಿ ಅಗತ್ಯತೆಗಳನ್ನು ಪರಿಗಣಿಸಿ, ಚರ್ಚಿಸಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರು ಹೇಳಿದರು.
ಸಂಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಂಡೂರು ತಾಲ್ಲೂಕಿನ ತಾಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ-2 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಏಳಿಗೆಗೆ ಬದ್ಧವಾಗಿದ್ದು, ಅಂಬೇಡ್ಕರ್ ಸಹಾಯಹಸ್ತ ಕಾರ್ಯಕ್ರಮದ ಮೂಲಕ ವಿವಿಧ ಅಸಂಘಟಿತ ವಲಯಗಳ ಜನರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.
ಅಮೆಜಾನ್, ಜೊಮ್ಯಾಟೊ, ಸ್ವಿಗ್ಗಿ ಮುಂತಾದ ಆನ್‌ಲೈನ್ ಕಂಪನಿಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್‌ಗಳ ಹಿತರಕ್ಷಣೆಗಾಗಿ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಗಿಗ್ ವರ್ಕರ್ಸ್ ಬಿಲ್ ಕಾನೂನು ತರಲಾಗಿದೆ. ಚಾಲಕರು ಮತ್ತು ಕ್ಲೀನರ್‌ಗಳ ಹಿತದೃಷ್ಟಿಯಿಂದ ಸ್ಮಾರ್ಟ್ ಕಾರ್ಡ್ ವಿತರಿಸುವ ಟ್ರಾನ್ಸ್‌ಪೋರ್ಟ್ ಬಿಲ್ ಯೋಜನೆ ಜಾರಿಯಲ್ಲಿದೆ. ಅದರಂತೆ ಚಿತ್ರರಂಗದ ಕಾರ್ಮಿಕರು ಹಾಗೂ ಮನೆಗೆಲಸ ಮಾಡುವ ಮಹಿಳೆಯರ ಸಾಮಾಜಿಕ ಭದ್ರತೆಗಾಗಿ ಸಿನಿ ಬಿಲ್ ಮತ್ತು ಡೊಮೆಸ್ಟಿಕ್ ಬಿಲ್ ನಂತಹ ಹೊಸ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷಯ ಲಾಡ್, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಸಂಡೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನೂರುದ್ದೀನ್.ಎಸ್., ಸಂಡೂರು ತಹಶೀಲ್ದಾರ ಅನಿಲ್ ಕುಮಾರ್.ಜಿ, ಸಂಡೂರು ತಾಪಂ ಇಓ ಮಡಗಿನ ಬಸಪ್ಪ, ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರು ಸೇರಿದಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.




