33.2 C
Bellary
Saturday, March 15, 2025

Localpin

spot_img

ಅಧಿಕಾರಿಗಳ ವಿರುದ್ಧ ದೂರು ಕೇಳಿ ಬಂದರೆ ಶಿಸ್ತು ಕ್ರಮ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ‘ನನ್ನ ಉಸ್ತುವಾರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ದೂರು ಬಂದರೆ ಸುಮ್ಮನಿರುವುದಿಲ್ಲ, ಅಂತಹ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಎಚ್ಚರಿಸಿದರು.

ಶನಿವಾರ, ನಗರದ ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಎರಡನೇ (ವಾರ್ಷಿಕ) ತ್ರೈಮಾಸಿಕ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಆಯುಷ್ ಇಲಾಖೆಯಲ್ಲಿ ಔಷಧಿ ವಿತರಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಲಾಖೆಯ ಪ್ರಗತಿಯ ಬಗ್ಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ, ಏಕೆ? ಎಂದು ಸಚಿವ ಬಿ.ನಾಗೇಂದ್ರ ಅವರು, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮ ವಹಿಸಬೇಕು. ಭ್ರೂಣ ಹತ್ಯೆ ಪತ್ತೆಹಚ್ಚುವುದು ತಡೆಗಟ್ಟಬೇಕು ಹಾಗೂ ಕೆಲವು ಆಸ್ಪತ್ರೆಗಳಲ್ಲಿ ಹಣ ಪಡೆದುಕೊಂಡು ಸೇವೆ ನೀಡುತ್ತಿರುವುದು ಕಂಡುಬರುತ್ತಿದ್ದು, ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿಗಾ ವಹಿಸಬೇಕು ಎಂದು ಸಚಿವ ಬಿ.ನಾಗೇಂದ್ರ ಅವರು ಸೂಚಿಸಿದರು.

ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ತುರ್ತು ಸೌಲಭ್ಯಕ್ಕಾಗಿ ಆಸ್ಪತ್ರೆಗಳ ಶುಶೂಷ್ರಕರಿಗೆ ಕರೆ ಮಾಡಿದಾಗ, ಶಾಸಕರ ಕರೆ ಎಂಬುದು ಲೆಕ್ಕಿಸದೇ, ಕರೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು. ಇದಕ್ಕೆ ಸಚಿವ ಬಿ.ನಾಗೇಂದ್ರ ಮಾತನಾಡಿ, ಯಾರಿಗಾದರೂ ಅಪಘಾತವಾದರೆ, ಅವರನ್ನು ಸಂಪರ್ಕಿಸಿದರೆ, ಕರೆ ಸ್ವೀಕರಿಸುವುದಿಲ್ಲ ಎಂದರೆ ಏನು ಅರ್ಥ? ವೈದ್ಯಾಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಬ್ಯಾಚ್‍ಗಳ ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಸಚಿವ ಬಿ.ನಾಗೇಂದ್ರ ಅವರು ಕಳವಳ ವ್ಯಕ್ತಪಡಿಸಿದರು. ಈ ಕುರಿತು ಮಧ್ಯಪ್ರವೇಶಿಸಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸರ್ಕಾರ ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಹಣ ವ್ಯಯ ಮಾಡುತ್ತಿದೆ, ಆದರೆ ಹಣ ದುರುಪಯೋಗವಾಗುವುದು ತಪ್ಪುತ್ತಿಲ್ಲ, ಮತ್ತು ರಸ್ತೆಗಳು ದುರಸ್ಥಿಗೊಳ್ಳುತ್ತಿರುವುದು ತಪ್ಪುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬಳ್ಳಾರಿ ತಾಲ್ಲೂಕಿನ ಹರಗಿನಡೋಣಿ, ಜಾನಕುಂಟೆ ಹಾಗೂ ಬೆಳಗಲ್ಲು ಗ್ರಾಮಗಳಿಗೆ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದ್ದು, ಅಲ್ಲಿಪುರ ಕೆರೆಯಿಂದ ಪೈಪ್‍ಲೈನ್ ವ್ಯವಸ್ಥೆ ಕೈಗೊಂಡು ಹರಗಿನಡೋಣಿಯ ಕೆರೆಯಲ್ಲಿ ನೀರು ಸಂಗ್ರಹಿಸುವ ಕೆಲಸ ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ತಾಲ್ಲೂಕಿನಲ್ಲಿ ಕೆಟ್ಟು ಹೋಗಿರುವ ಆರ್‍ಓ ಘಟಕಗಳನ್ನು ಗುರುತಿಸಿ, ಅವುಗಳ ದುರಸ್ಥಿಗೆ ಕ್ರಮ ವಹಿಸಬೇಕು. ಅರ್ಹ ಗುತ್ತಿಗೆದಾರರರಿಗೆ ಕಾಮಗಾರಿ ನೀಡಬೇಕು. ಜನರಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸಚಿವ ಬಿ.ನಾಗೇಂದ್ರ, ತಾಪಂ ಇಓಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿಯರ್‍ಗಳಿಗೆ ಸೂಚಿಸಿದರು.

ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪೂರ್ಣ ಮಾಹಿತಿ ನೀಡುವುದು ಸರಿಯಲ್ಲ. ಅಧಿಕಾರಿಗಳು ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಇಲ್ಲದಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಗೈರು ಹಾಜರಾದವರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇಎಸ್‍ಐ ಆಸ್ಪತೆ ನಿರ್ಮಾಣಕ್ಕೆ ಸ್ಥಳ ಮಂಜೂರಾತಿ ಕುರಿತು, ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles