ಬಳ್ಳಾರಿ: ಸಂಡೂರು ತಾಲೂಕಿನ ತಾಳೂರು ಮತ್ತು ಬೊಮ್ಮಘಟ್ಟದಲ್ಲಿ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಶಿಕ್ಷಕರ ವಸತಿಗಳ ನಿರ್ಮಾಣಕ್ಕೆ ಸರ್ಕಾರ ತುರ್ತಾಗಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದರು.
ಸುವರ್ಣಸೌಧದಲ್ಲಿ ಶುಕ್ರವಾರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ತಾಳೂರು ಶಿಕ್ಷಕರ ವಸತಿಗೃಹವನ್ನು 2008-09 ರ ಆರ್ಥಿಕ ಸಾಲಿನಲ್ಲಿ ಮತ್ತು ಬೊಮ್ಮಘಟ್ಟದಲ್ಲಿ ಶಿಕ್ಷಕರ ವಸತಿಗೃಹ ನಿರ್ಮಾಣ ಕಾಮಗಾರಿಯನ್ನು 2011-12 ರ ಆರ್ಥಿಕ ಸಾಲಿನಲ್ಲಿ ನಿರ್ಮಿತಿ ಕೇಂದ್ರ ಪ್ರಾರಂಭಿಸಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಈಗಾಗಲೇ ನಿರ್ಮಾಣವಾಗಿರುವ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ಅಲ್ಲದೆ, ಸರ್ಕಾರದ ಅನುದಾನ ದುರುಪಯೋಗವಾಗುತ್ತಿದೆ. ಕಾರಣ ಸರ್ಕಾರ ಶಿಕ್ಷಕರ ವಸತಿಗೃಹಗಳ ನಿರ್ಮಾಣವನ್ನು ಪೂರ್ಣಗೊಳಿಸಲು ತ್ವರಿತವಾಗಿ ಅನುದಾನ ಬಿಡುಗಡೆ ಮಾಡಿ, ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬಳ್ಳಾರಿ ಜಿಲ್ಲೆಯಲ್ಲಿ 17, ವಿಜಯನಗರ ಜಿಲ್ಲೆಯಲ್ಲಿ 19 ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿರುಗುಪ್ಪ ತಾಲೂಕಿನ ರಾರಾವಿ ಸಮೀಪದ ಬಗ್ಗೂರು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ನಿರ್ಮಾಣಗೊಂಡು ಮಾರ್ಚ್, 2023ರ 22 ರಂದು ಉದ್ಘಾಟನೆಯಾಗಿದೆ. ಈ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದು ಹೇಳಿದರು.