ಬೆಳಗಾಯಿತು ವಾರ್ತೆ| www.belagayithu.in
ನವದೆಹಲಿ: ಮಹಿಳಾ ಮೀಸಲಾತಿಯ ನೆಪದಲ್ಲಿ ದೇಶದ ಒಕ್ಕೂಟ ರಚನೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಮಸೂದೆಯ ಸೋಲು ವಿರೋಧ ಪಕ್ಷಗಳ ಒಗ್ಗಟ್ಟಿನ ವಿಜಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಿರೋಧ ಪಕ್ಷವು ಮಹಿಳಾ ಮೀಸಲಾತಿಯನ್ನು ವಿರೋಧಿಸುವುದಿಲ್ಲ. ಮಹಿಳಾ ಮೀಸಲಾತಿ ಕಾಯ್ದೆ 2023 ಅನ್ನು ಬೆಂಬಲಿಸುತ್ತೇವೆ. ಸರ್ಕಾರವು ಲೋಕಸಭೆಯ ಪ್ರಸ್ತುತ ಬಲದ ಮೇಲೆ ಅದನ್ನು ಜಾರಿಗೆ ತರಲು ಬಯಸಿದರೆ ಬೆಂಬಲ ನೀಡುತ್ತೇವೆ ಎಂದು ಒತ್ತಿ ಹೇಳಿದ್ದಾರೆ.
ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರುವ ಹಿಂದಿನ ಸರ್ಕಾರದ ಏಕೈಕ ಉದ್ದೇಶ ಕ್ಷೇತ್ರ ಪುನರ್‌ವಿಂಗಡಣೆ ಮೂಲಕ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯುವುದಾಗಿತ್ತು ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.





