29.1 C
Bellary
Tuesday, May 14, 2024

Localpin

spot_img

ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ನೋಂದಾಯಿಸಿ ಕೊಳ್ಳಲು ಮನ ವೊಲಿಸಿ

ಬಳ್ಳಾರಿ: ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ, ತ್ವರಿತವಾಗಿ ವರದಿ ಸಲ್ಲಿಸಬೇಕು. ಶೀಘ್ರವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬರಗಾಲ ಪೀಡಿತ ಪ್ರದೇಶ ಘೋಷಣೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ವರದಿ ತ್ವರಿತವಾಗಿ ಸಲ್ಲಿಸಬೇಕು ಎಂದು ಯುವ ಸಬಲೀಕರಣ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಳ್ಳಾರಿ ತಾಲೂಕು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ತಾಲೂಕು ಅತಿ ಹೆಚ್ಚು ಕೃಷಿ ಪ್ರಾಧಿನ್ಯತೆಯ ಕ್ಷೇತ್ರವಾಗಿದೆ. ರೈತರು ಅತಿಹೆಚ್ಚು ಕೃಷಿ ಚಟುವಟಿಕೆ ಅವಲಂಬಿಸಿದ್ದಾರೆ. ಇಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಬೇಕು. ಬೆಳೆ ವಿಮೆ ಕುರಿತಂತೆ ಜಾಗೃತಿ ಮೂಡಿಸಿ, ನೊಂದಣಿ ಮಾಡಿಸಲು ಸಲಹೆ ನೀಡಬೇಕು. ಇದರಿಂದ ರೈತರಿಗೆ ಬೆಳೆ ಹಾನಿಯಾದಲ್ಲಿ ಸಹಾಯವಾಗಲಿದೆ ಎಂದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಂಬಂಧಿಸಿದಂತೆ, ಕೃಷಿ ಯಂತ್ರೋಪಕರಣಗಳು ಹಾಗೂ ವಿವಿಧ ಯೋಜನೆಗಳ ಸೌಲಭ್ಯಗಳು ರೈತರಿಗೆ ತಲುಪುತ್ತಿದೆಯೇ ಎಂಬುದರ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ರೈತರು ಯಾವುದೇ ಕಾರಣಕ್ಕೂ ವಿವಿಧ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಬಗ್ಗೆ ನಿಗಾ ವಹಿಸಬೇಕು. ನೀರಿನ ಸಂಗ್ರಹಾಗಾರಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಕೆರೆ, ಓಎಚ್‍ಟಿಗಳು ಮತ್ತು ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಉದಾಸೀನತೆ ತೋರಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಆರೋಗ್ಯ ಸೇವೆ ಪಡೆಯಲು ನಗರಕ್ಕೆ ಬರುತ್ತಾರೆ. ಅವರನ್ನು ಸಮುದಾಯ ಆರೋಗ್ಯ ಕೇಂದ್ರ ಮತ್ತು ನಮ್ಮ ಕ್ಲಿನಿಕ್‍ಗಳಲ್ಲಿಯೇ ಉಪಚರಿಸಬೇಕು. ಅಗತ್ಯ ಆಂಬ್ಯುಲೆನ್ಸ್ ವ್ಯವಸ್ಥೆ ಇರಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ನಗರಕ್ಕೆ ತೆರಳಿ ಎನ್ನುವಂತಿಲ್ಲ. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿದ್ದಲ್ಲಿ ಗಮನಕ್ಕೆ ತರಬೇಕು. ಈ ಕುರಿತು ಎಂದು ತಾಲೂಕು ಆರೋಗ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವಂತಹ ಕೆಲಸ ಮಾಡಬೇಕು. ಬಳ್ಳಾರಿ ತಾಲೂಕು ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶದಲ್ಲಿ ಹಿಂದುಳಿದಿದೆ. ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ನ್ಯೂನತೆ ಗುರುತಿಸಿ, ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು. ತಾಲೂಕನ್ನು ಮುನ್ನೆಲೆಗೆ ತರಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ವರದಿ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles