ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ, ಜೂನ್ 10: ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯದ 28 ಕ್ಷೇತ್ರಗಳ ಪೈಕಿ 9 ಸೀಟುಗಳಲ್ಲಿ ಜಯಗಳಿಸಿದೆ. ಚುನಾವಣೆಯಲ್ಲಿ ಬಳ್ಳಾರಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ. ತುಕರಾಂ ಗೆಲುವು ಸಾಧಿಸಿದ್ದಾರೆ. ಅವರು ಸಂಡೂರು ಕ್ಷೇತ್ರದ ಹಾಲಿ ಶಾಸಕರು ಹೌದು. ಈಗ ಅವರು ಲೋಕಸಭೆ, ವಿಧಾನಸಭೆ ಯಾವುದಾರೂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ.
ಸಂಡೂರು ಕ್ಷೇತ್ರದ ಹಾಲಿ ಶಾಸಕರಾಗಿದ್ದರೂ ಸಹ ಇ. ತುಕರಾಂ ಅವರನ್ನು ಕಾಂಗ್ರೆಸ್ ಲೋಕಸಭೆ ಚುನಾವಣೆ ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಅವರು 7,30,845 ಮತಗಳನ್ನು ಪಡೆದು, ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ವಿರುದ್ಧ 98,992 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಸುದ್ದಿ ಸುಳ್ಳು ಎಂದು ಇ. ತುಕರಾಂ ಸ್ಪಷ್ಟಪಡಿಸಿದ್ದಾರೆ. ನಾನು ನನ್ನ ಕಾರ್ಯಕರ್ತರ, ಅಭಿಮಾನಿಗಳ ಭಾವನೆಗಳಿಗೆ ಬೆಲೆ ನೀಡುತ್ತೇನೆ. ಆದರೆ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಸುದ್ದಿ ಸುಳ್ಳು” ಎಂದರು.