ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಹಸಿರು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಕೆರೆಯ ಹೂಳಿನ ಬಳಕೆ ಅತ್ಯಂತ ಅವಶ್ಯಕ ಎಂದು ಐಸಿಎಆರ್ – ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡಾ.ಬಿ. ಕೃಷ್ಣರಾವ್ ಅವರು ಹೇಳಿದರು.
ಐಸಿಎಆರ್ – ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆ ವತಿಯಿಂದ ‘ಮೇರಾ ಗಾಂವ್ ಮೇರಾ ಗೌರವ್’ ಕಾರ್ಯಕ್ರಮದಡಿ, ಇಫ್ಕೋ ಸಹಯೋಗದೊಂದಿಗೆ ‘ಸ್ಮಾರ್ಟ್ ರಸಗೊಬ್ಬರ ಬಳಕೆ, ಪೋಷಕಾಂಶ ಬಳಕೆ ದಕ್ಷತೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ’ ಕುರಿತು ಬಳ್ಳಾರಿ ತಾಲ್ಲೂಕಿನ ಬಿ.ಬೆಳಗಲ್ ತಾಂಡಾದಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮತೋಲಿತ ರಸಗೊಬ್ಬರ ಬಳಕೆ, ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳು, ದನ ಹಾಗೂ ಆಡು ಸಾಕಣೆ ಮತ್ತು ತರಕಾರಿ ಬೆಳೆಗಳ ಮಹತ್ವದ ಅರಿವು ಹೊಂದಬೇಕು ಎಂದರು.
ಮಣ್ಣು ವಿಭಾಗದ ಹಿರಿಯ ವಿಜ್ಞಾನಿ ಡಾ. ಮಹಿಪಾಲ್ ಚೌಧರಿ ಅವರು ಮಾತನಾಡಿ, ಸುಸ್ಥಿರ ಕೃಷಿಗಾಗಿ ಸರಿಯಾದ ಸಮಯ ಮತ್ತು ನಿಖರ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸಬೇಕು. ಬೇವು ಲೇಪಿತ ಯೂರಿಯಾ ಹಾಗೂ ಗಂಧಕ ಲೇಪಿತ ಯೂರಿಯಾದಂತಹ ನಿಧಾನವಾಗಿ ಬಿಡುಗಡೆಯಾಗುವ ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಹಣ್ಣು ವಿಭಾಗದ ವಿಜ್ಞಾನಿ ಅನುಷಾ ಎನ್. ಎಂ. ಅವರು ಮಾತನಾಡಿ, ಮಣ್ಣಿನ ಪರೀಕ್ಷಾ ವರದಿಯ ಆಧಾರದ ಮೇಲೆಯೇ ರಸಗೊಬ್ಬರಗಳನ್ನು ಬಳಸುವುದರಿಂದ ಕೃಷಿ ವೆಚ್ಚ ಕಡಿಮೆಯಾಗಿ, ಹೆಚ್ಚಿನ ಉತ್ಪಾದನೆ ಮತ್ತು ಉತ್ತಮ ಲಾಭ ಪಡೆಯಬಹುದು ಎಂದು ಅವರು ರೈತರಿಗೆ ಸಲಹೆ ನೀಡಿದರು. ಇಡೀ ವೇಳೆ ಮಣ್ಣಿನ ಮಾದರಿಯನ್ನು ಸಂಗ್ರಹಿಸುವ ಸರಿಯಾದ ವೈಜ್ಞಾನಿಕ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.





