ಸೆ.25ರಿಂದ ಬಳ್ಳಾರಿಯಲ್ಲಿ ‘ನಿರ್ಮಾಣ–2026: 77 ಮಳಿಗೆಗಳೊಂದಿಗೆ ಕಟ್ಟಡ ನಿರ್ಮಾಣಕ್ಕೆ ಪಣ

ಬೆಳಗಾಯಿತು ವಾರ್ತೆ
ಬಳ್ಳಾರಿ: ಎಂಜಿನಿಯರ್‌ಗಳು, ಕಟ್ಟಡ ನಿರ್ಮಾಣ ಕ್ಷೇತ್ರದ ತಜ್ಞರು ಹಾಗೂ ವಿವಿಧ ಕಂಪನಿಗಳ ಸಹಯೋಗದಲ್ಲಿ ಆಯೋಜಿಸಿರುವ ‘ನಿರ್ಮಾಣ–2026’ ಪ್ರದರ್ಶನ ಸೆಪ್ಟೆಂಬರ್‌ 25ರಿಂದ 27ರವರೆಗೆ ನಗರದ ಐಟಿಐ ಮೈದಾನದಲ್ಲಿ ನಡೆಯಲಿದೆ ಎಂದು ಎಸಿಸಿಯ ಅಧ್ಯಕ್ಷರು ಎ.ಎಸ್ ಸತ್ಯನಾರಾಯಣ ಅವರು ತಿಳಿಸಿದರು.

ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ವತಿಯಿಂದ ಪ್ರತಿ ಎರಡು ತಿಂಗಳಿಗೊಮ್ಮೆ ತಾಂತ್ರಿಕ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿದ್ದು, ವಿವಿಧ ಕಂಪನಿಗಳ ತಜ್ಞರಿಂದ ಹೊಸ ತಂತ್ರಜ್ಞಾನ ಮತ್ತು ನಿರ್ಮಾಣ ಸಾಮಗ್ರಿಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಈ ತಂತ್ರಜ್ಞಾನವನ್ನು ಕಟ್ಟಡ ನಿರ್ಮಾಣದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ‘ನಿರ್ಮಾಣ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇದು ‘ನಿರ್ಮಾಣ’ದ 7ನೇ ಆವೃತ್ತಿಯಾಗಿದ್ದು, 2017ರಿಂದ ವಿವಿಧ ಕಾರಣಗಳಿಂದ ಪರ್ಯಾಯ ವರ್ಷಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಜರ್ಮನ್ ವಾಟರ್‌ಪ್ರೂಫ್ ಟೆಂಟ್‌ ನಿರ್ಮಿಸಿ, ವಿವಿಧ ಕಂಪನಿಗಳ 77 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಬಳ್ಳಾರಿ ಮಾತ್ರವಲ್ಲದೆ ಬೆಂಗಳೂರು, ಗೋವಾ, ಚೆನ್ನೈ ಸೇರಿದಂತೆ ವಿವಿಧ ಪ್ರದೇಶಗಳ ಕಂಪನಿಗಳು ಭಾಗವಹಿಸಲಿವೆ ಎಂದರು.

ನಿರ್ಮಾಣ ಕ್ಷೇತ್ರಕ್ಕೆ ಅಗತ್ಯವಾದ ಸಿಮೆಂಟ್, ಸ್ಟೀಲ್, ಎಲೆಕ್ಟ್ರಿಕಲ್, ಪ್ಲಂಬಿಂಗ್, ಇಂಟೀರಿಯರ್, ಎಕ್ಸ್‌ಟೀರಿಯರ್, ಫಸಾಡ್, ಗ್ರಾನೈಟ್, ಮಾರ್ಬಲ್, ಕಿಟಕಿ, ಲಿಫ್ಟ್, ಸೋಲಾರ್ ಹಾಗೂ ವಾಟರ್‌ಪ್ರೂಫಿಂಗ್‌ ಸೇರಿದಂತೆ ವಿವಿಧ ಉತ್ಪನ್ನಗಳು ಪ್ರದರ್ಶನದಲ್ಲಿ ಲಭ್ಯವಿರಲಿವೆ. ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೆ.25 ಮತ್ತು 26ರಂದು ವಿವಿಧ ತಾಂತ್ರಿಕ ವಿಚಾರಗಳ ಕುರಿತು ವಿಶೇಷ ಸೆಮಿನಾರ್‌ಗಳನ್ನು ಆಯೋಜಿಸಲಾಗಿದೆ. ಬೆಂಗಳೂರು, ಗೋವಾ ಹಾಗೂ ಚೆನ್ನೈನಿಂದ ತಜ್ಞರು ಆಗಮಿಸಿ ವಿಷಯ ಮಂಡಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಕುರಿತು ಮಾಹಿತಿ ನೀಡುವ ಉದ್ದೇಶವೂ ಕಾರ್ಯಕ್ರಮಕ್ಕಿದೆ ಎಂದು ಅವರು ತಿಳಿಸಿದರು.

ಪ್ರದರ್ಶನದಲ್ಲಿ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರತ್ಯೇಕ ತಾಂತ್ರಿಕ ಕೊಠಡಿ ಹಾಗೂ ಸೆಮಿನಾರ್‌ ಹಾಲ್‌ ವ್ಯವಸ್ಥೆ ಮಾಡಲಾಗಿದೆ. ಹೊಸ ಮನೆ ನಿರ್ಮಿಸಲು ಯೋಜಿಸುವವರು ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ‘ಒನ್‌ಸ್ಟಾಪ್‌ ಸೊಲ್ಯೂಷನ್‌’ ಆಗಲಿದೆ ಎಂದ ಅವರು,
ಇದರ ಜೊತೆಗೆ ಸಂಘಟನೆಯ ವತಿಯಿಂದ ವರ್ಷಪೂರ್ತಿ ಸಾಮಾಜಿಕ ಚಟುವಟಿಕೆಗಳನ್ನೂ ನಡೆಸಲಾಗುತ್ತಿದೆ. ರಕ್ತದಾನ ಶಿಬಿರದಲ್ಲಿ ಸುಮಾರು 55 ಯೂನಿಟ್‌ ರಕ್ತ ಸಂಗ್ರಹ, ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದಿದ್ದು, ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 700 ಮಂದಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಸೆ.27ರಂದು ಬೆಳಿಗ್ಗೆ 5.30ಕ್ಕೆ ದೊಡ್ಡಮಟ್ಟದ ದೇವಸ್ಥಾನದಿಂದ ಮ್ಯಾರಥಾನ್‌ ಆಯೋಜಿಸಲಾಗಿದ್ದು, ಕ್ರಿಸ್ಮರ್‌ ಗ್ರಾನೈಟ್ಸ್‌ ಅಂಡ್‌ ಮಾರ್ಬಲ್ಸ್‌ ಸಹಯೋಗ ನೀಡಲಿದೆ. ಸಾರ್ವಜನಿಕರು, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಶಿಧರ ಗಜೇಂದ್ರ ಗಡ್, ರಾಖೇಶ್ ಬಿ.ಟಿ, ಸುಭಾಷ್ ಚಂದ್ರ, ಆರ್. ಸುನೀಲ್, ನಿರಂಜನ್ ಪಿ.ಎಂ, ಮೂರ್ತಿ ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles