ಬೆಳಗಾಯಿತು ವಾರ್ತೆ
ಬಳ್ಳಾರಿ: ಮತದಾರರ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಫಾರಂ-7 ಸಲ್ಲಿಸುವ ಮೂಲಕ 7,500ಕ್ಕೂ ಅಧಿಕ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ್ ಬಣ) ಜಿಲ್ಲಾ ಸಂಚಾಲಕ ಎ. ಮಾನಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ನಕ್ಷತ್ರ ಹೋಟೆಲ್ ಸಭಾಂಗಣದಲ್ಲಿ ಅಹಿಂದ ಮುಖಂಡರು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯೇತರ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲು ಬಿಜೆಪಿ ವತಿಯಿಂದ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಬಿಎಲ್‌ಒಗಳು ಮನೆಮನೆಗೆ ತೆರಳಿ ಅಗತ್ಯ ಮಾಹಿತಿ ಪಡೆದು ಮತದಾರರ ಹೆಸರುಗಳನ್ನು ನೋಂದಾಯಿಸಿದ್ದರೂ, ಇದೀಗ ಅಂತಹ ಮತದಾರರ ಹೆಸರುಗಳನ್ನು ಕೈಬಿಡಲು ಪಾಲಿಕೆ ಅಧಿಕಾರಿ ನಂದೀಶ್ ಹಾಗೂ ಬಿಜೆಪಿ ಪಾಲಿಕೆ ಸದಸ್ಯರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. ಪಾಲಿಕೆ ಅಧಿಕಾರಿ ನಂದೀಶ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯ ಮೋತ್ಕಾರ್ ಶ್ರೀನಿವಾಸ್ ಅವರು 7,000ಕ್ಕೂ ಅಧಿಕ ಮತದಾರರ ಹೆಸರುಗಳನ್ನು ಕೈಬಿಡುವಂತೆ ಮನವಿ ಸಲ್ಲಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ಆರೋಪಿಸಿದ ಅವರು, ಈ ಹಿನ್ನೆಲೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಯಾವುದೇ ಪ್ರಯತ್ನ ನಡೆಯಬಾರದು ಎಂದು ಒತ್ತಾಯಿಸಿದರು.
ಗಾದಿಲಿಂಗನಗೌಡ ಮಾತನಾಡಿ, ಬಡ ಹಾಗೂ ಸಾಮಾನ್ಯ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಮತದಾರರ ಹಕ್ಕುಗಳ ರಕ್ಷಣೆಗೆ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಬಿ.ಆರ್.ಎಲ್. ಶ್ರೀನಿವಾಸ್ ಮಾತನಾಡಿ, ತಮ್ಮ 13ನೇ ವಾರ್ಡ್‌ನಲ್ಲಿ 578 ಪರಿಶಿಷ್ಟ ಪಂಗಡದ ಮತದಾರರ ಪೈಕಿ 65 ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು. ಇದು ಕಾನೂನು ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಹುಮಾಯೂನ್ ಖಾನ್ ಮಾತನಾಡಿ, ತಮ್ಮ ಧರ್ಮಗುರು ಖಾಜಿಯವರ ಕುಟುಂಬದ ಸದಸ್ಯರ ಹೆಸರುಗಳ ಜತೆಗೆ ಹಾಲಿ ಪಾಲಿಕೆ ಉಪಮೇಯರ್ ಡಿ. ಸುಕುಮ್ ಅವರ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು. ಈ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.
ಫಾರಂ-7 ಸಲ್ಲಿಕೆ ಪ್ರಕ್ರಿಯೆಯನ್ನು ಪರಿಶೀಲಿಸಬೇಕು. ಅರ್ಹ ಮತದಾರರ ಹೆಸರುಗಳನ್ನು ಕೈಬಿಡುವಂತೆ ಸುಳ್ಳು ಅಥವಾ ಆಧಾರರಹಿತ ಅರ್ಜಿಗಳನ್ನು ಸಲ್ಲಿಸಿದವರ ವಿರುದ್ಧ ಹಾಗೂ ತಪ್ಪಿತಸ್ಥ ಬಿಎಲ್‌ಒಗಳು ಮತ್ತು ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಫಾರಂ-7 ಅನ್ನು ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಅಥವಾ ಅರ್ಹ ಕಾರಣಗಳ ಆಧಾರದ ಮೇಲೆ ಹೆಸರು ಅಳಿಸಲು ಬಳಸಬಹುದಾಗಿದೆ. ಮರಣ, ಶಾಶ್ವತವಾಗಿ ಸ್ಥಳಾಂತರ, ಈಗಾಗಲೇ ನೋಂದಣಿಯಾಗಿರುವುದು ಅಥವಾ ಭಾರತೀಯ ನಾಗರಿಕನಲ್ಲದಿರುವುದು ಮುಂತಾದ ಕಾರಣಗಳನ್ನು ನಮೂದಿಸಬೇಕಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕೆ. ಚಿದಾನಂದಪ್ಪ, ಎಲ್. ಮಾರಣ್ಣ, ಮಿಂಚು ಶ್ರೀನಿವಾಸ್, ನಂದೀಶ್, ಬಾವಿ ಲೋಕೇಶ್ ಸೇರಿದಂತೆ ಹಲವರು ಮಾತನಾಡಿದರು. ಜಗನ್, ದೇವಿನಗರ ಪರಶುರಾಮ್, ಅಯಾಜ್ ಅಹಮದ್, ಶಿವರಾಜ್ ತಳವಾರ, ದುರ್ಗಪ್ಪ ಬಿಸಿಲಹಳ್ಳಿ, ಮುರಳಿ, ಪಾಲಿಕೆ ಸದಸ್ಯ ನೂರಾಹಮದ್, ಮುಖಂಡ ಕೆಣೆಕಲ್ ಮಹಬೂಬ್ ಸಾಹೇಬ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.





