ಬೆಳಗಾಯಿತು ವಾರ್ತೆ |www.belagayitu.in
ಬಳ್ಳಾರಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಬಳ್ಳಾರಿ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ನಗರದ ಗಾಂಧಿಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಭಾರತೀಯ ದಂತ ವೈದ್ಯರ ಸಂಘದ ಕೋರಿಕೆ ಮೇರೆಗೆ ಪಾಲಿಕೆ ಮೂರನೇ ವಾರ್ಡ್ ಸದಸ್ಯ ಎಂ.ಪ್ರಭಂಜನ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಉಚಿತ ದಂತ ತಪಾಸಣಾ ಶಿಬಿರವನ್ನು ಪಾಲಿಕೆ ಮೇಯರ್ ಬಿ.ಶ್ವೇತಾ ಉದ್ಘಾಟಿಸಿದರು.
ಮೇಯರ್ ಬಿ.ಶ್ವೇತಾ ಮಾತನಾಡಿ ಮಹಿಳಾ ಪೌರ ಕಾರ್ಮಿಕರು ಯಾವುದೇ ಬೇಧಭಾವ ಇಲ್ಲದೇ ನಗರದಲ್ಲಿ ಸ್ವಚ್ಛತಾ ಸೇವೆ ಮಾಡುವ ಮೂಲಕ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅಂತಹ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವಲ್ಲಿ ನಾವೆಲ್ಲರೂ ಮುಂದೆ ಬರಬೇಕು ಎಂದು ತಿಳಿಸಿದರು.
ಶಿಬಿರದ ಆಯೋಜಕ, ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ಕೇವಲ ನಗರವನ್ನು ಮಾತ್ರ ಸ್ವಚ್ಛ ಮಾಡುತ್ತಿಲ್ಲ. ಅವರ ಸ್ವಚ್ಛತಾ ಕೆಲಸದಲ್ಲಿ ನಮ್ಮೆಲ್ಲರ ಆರೋಗ್ಯವಿದೆ. ನಾವಿಂದು ಉತ್ತಮವಾಗಿ ಆರೋಗ್ಯವಾಗಿದ್ದೇವೆ ಎಂದರೆ ಅದಕ್ಕೆ ಪೌರ ಕಾರ್ಮಿಕರ ಕೊಡುಗೆ ಕಾರಣ. ಪೌರ ಕಾರ್ಮಿಕರ, ಮಹಿಳಾ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು, ಸಹಾಯ, ಸಹಕಾರ ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.