ಬೆಳಗಾಯಿತು ವಾರ್ತೆ
ಚಡಚಣ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ರವಿವಾರ ಮಾರ್ಚ್ 10ರಂದು ಸಂಸ್ಥಾಪನ ದಿನ ಹಾಗೂ ನೂತನ ತಾಲೂಕಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಿಜಯಪುರದಲ್ಲಿ ಫೆಡಿನಾ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ರಮೇಶ ನಾಯಕ ತಿಳಿಸಿದ್ದಾರೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಳೆದ ಹಲವು ವರ್ಷಗಳಿಂದ ವೈಜ್ಞಾನಿಕ ಕಾರ್ಯಕ್ರಮಗಳನ್ನು ರಾಜ್ಯಮಟ್ಟದಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಂಡು ರಾಜ್ಯಾದ್ಯಂತ ಜನರಲ್ಲಿ ಜಾಗೃತಿ ಉಂಟು ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸ್ಪರ್ಧಾ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಿ ವಿ ರಾಮನ್ ವಿಜ್ಞಾನ ರಸಪ್ರಶ್ನೆ , ಸ್ವಾತಂತ್ರ್ಯ ಅಮೃತ ಮಹೋತ್ಸವ ರಸಪ್ರಶ್ನೆ, ಜಲ ನೈರ್ಮಲ್ಯ ರಸಪ್ರಶ್ನೆ ,ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದ ಜೊತೆಗೆ ನಗದು ಬಹುಮಾನ, ಸ್ಮರಣಿಕೆ, ಪುಸ್ತಕಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಕಳೆದ ಹಲವು ವರ್ಷಗಳಿಂದ ಸಮಿತಿಯು ಪ್ರತಿ ವರ್ಷ ರಾಜ್ಯ ಶೈಕ್ಷಣಿಕ ಸಮ್ಮೇಳನ ಹಾಗೂ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ,ಚಿತ್ರಕಲಾ ಪ್ರದರ್ಶನ ಹಾಗೂ ವೈಜ್ಞಾನಿಕ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಉತ್ಕೃಷ್ಟ ಸೇವೆ ಸಲ್ಲಿಸಿದ ಶಿಕ್ಷಕರಿಗೆ ರಾಜ್ಯಮಟ್ಟದ ಅನಿತಾ ಕೌಲ್ , ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಂಸ್ಥಾಪನ ದಿನ ಹಾಗೂ ನೂತನ ತಾಲೂಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಪ್ರಭುಗೌಡ ಪಾಟೀಲ ಅಧ್ಯಕ್ಷರಾದ ಜಿ ಎಸ್ ಕಾಂಬಳೆ, ಚಡಚಣ ತಾಲೂಕ ಘಟಕದ ಗೌರವಾಧ್ಯಕ್ಷರಾದ ಮೋಹನ ಚೋಳಕೆ,ಮಹಿಳಾ ಘಟಕದ ಅಧ್ಯಕ್ಷರಾದ ಸುಧಾ ಚೋಳಕೆ, ಕಾರ್ಯದರ್ಶಿಗಳಾದ ವೈಶಾಲಿ ಬೀಳೂರ,ಡಾ. ನಂದಾ ತಿಕೋಟಿ, ಬೀನಾಕೌಸರ್, ಸಿ ವಿ ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಸಂಚಾಲಕರಾದ ಕಾಶಿಮಾಭಿ ನದಾಫ್, ಜಯಮಾಲಾ ಪಾಟೀಲ, ಪ್ರದೀಪ್ ಮದಭಾವಿ ಅಶೋಕ ಕಂಚಗಾರ, ಅರುಣ ಕೋರವಾರ ಮತ್ತು ವಿವಿಧ ತಾಲೂಕುಗಳ ಅಧ್ಯಕ್ಷರು ಭಾಗವಹಿಸುವರು ಎಂದು ಕಾರ್ಯದರ್ಶಿ ರಮೇಶ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.