ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಆರ್ಟಿಒ ಕಚೇರಿ ಹೊರಭಾಗದಲ್ಲಿರುವ ಫುಟ್ಪಾತ್ನ್ನು ಕೆಲವರು ಅಂಗಡಿ ಹಾಗೂ ಇತರೆ ವ್ಯಾಪಾರ ಚಟುವಟಿಕೆಗಳಿಗಾಗಿ ಶೆಡ್ಗಳನ್ನು ನಿರ್ಮಿಸಿಕೊಂಡು ಅತಿಕ್ರಮಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಫುಟ್ಪಾತ್ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ಮೀಸಲಾಗಿದ್ದರೂ, ಅದರ ಮೇಲೆ ಶೆಡ್ಗಳನ್ನು ನಿರ್ಮಿಸಿ ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸಂಚಾರದ ನಡುವೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದ್ದು, ಅಪಘಾತದ ಆತಂಕವೂ ಸಾರ್ವಜನಿಕರಲ್ಲಿ ಮೂಡಿದೆ.
ವಿಶೇಷವಾಗಿ ಇದೇ ಮಾರ್ಗದಲ್ಲಿ ಶಾಲೆಗೆ ತೆರಳುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಫುಟ್ಪಾತ್ ಅತಿಕ್ರಮಣದಿಂದ ಅವರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಮಹಿಳೆಯರು, ವೃದ್ಧರು ಹಾಗೂ ಇತರೆ ಪಾದಚಾರಿಗಳಿಗೂ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಆರ್ಟಿಒ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಫುಟ್ಪಾತ್ ಮೇಲೆ ಶೆಡ್ಗಳನ್ನು ನಿರ್ಮಿಸಿ ವ್ಯಾಪಾರ ನಡೆಸಲು ಯಾವುದೇ ಪರವಾನಗಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಹೀಗಿದ್ದರೂ ಸಾರ್ವಜನಿಕ ಬಳಕೆಯ ಜಾಗದಲ್ಲಿ ಅತಿಕ್ರಮಣ ಮುಂದುವರಿದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಫುಟ್ಪಾತ್ ಮೇಲಿನ ಅಕ್ರಮ ಶೆಡ್ಗಳು ಹಾಗೂ ಇತರೆ ಅತಿಕ್ರಮಣಗಳನ್ನು ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವಿಳಂಬ ಮಾಡದೆ ಫುಟ್ಪಾತ್ನ್ನು ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.





