ಬೆಳಗಾಯಿತು ವಾರ್ತೆ
ಬಳ್ಳಾರಿ: ಪ್ರಸಕ್ತ ಸಾಲಿನ ‘ಸ್ವಚ್ಛತೆಯಲ್ಲಿ ಸಹಭಾಗಿತ್ವ, ಸ್ವಚ್ಛ ಭಾರತ, ವಿಕಸಿತ ಭಾರತ’ ಎಂಬ ಶೀರ್ಷಿಕೆಯಡಿ ಅಕ್ಟೋಬರ್ 2 ರವರೆಗೆ ‘ಸ್ವಚ್ಛತಾ ಹೀ ಸೇವಾ-2026’ ಅಭಿಯಾನವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿಯನ್ನು ರಚಿಸಲಾಗಿದ್ದು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿಯಾನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಕಸ ಸುರಿಯುವ ಹಾಗೂ ಸಾರ್ವಜನಿಕ ನೈರ್ಮಲ್ಯಕ್ಕೆ ಸವಾಲಾಗಿರುವ ಕಪ್ಪು ಚುಕ್ಕೆ (ಬ್ಲಾö್ಯಕ್ ಸ್ಪಾಟ್) ಸ್ಥಳಗಳನ್ನು ಗುರುತಿಸಿ, ನಿಗದಿತ ಕಾಲಮಿತಿಯೊಳಗೆ ಸ್ವಚ್ಛಗೊಳಿಸಿ ಸುಸ್ಥಿರವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ನಿರ್ವಹಣಾ ಘಟಕಗಳಿಗೆ ‘ಸ್ವಚ್ಛತಾ ಜ್ಞಾನ ಯಾತ್ರೆ’ ಮೂಲಕ ಭೇಟಿ ನೀಡಿಸುವುದು, ಮಳೆನೀರು ಕೊಯ್ಲು ಹಾಗೂ ಜಲ ಸಂರಕ್ಷಣೆ ಕುರಿತು ಸಂವಾದಗಳನ್ನು ಆಯೋಜಿಸಬೇಕು. ನೈರ್ಮಲ್ಯ ಕಾರ್ಮಿಕರು ಮತ್ತು ಸಫಾಯಿಮಿತ್ರರಿಗೆ ವಿಶೇಷ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ, ಅಗತ್ಯ ಸುರಕ್ಷತಾ ಪರಿಕರಗಳು ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ತಲುಪಿಸಿ ಗೌರವಿಸಲಾಗುವುದು ಎಂದು ವಿವರಿಸಿದರು.
ಮನೆ-ಮನೆಗಳಲ್ಲಿ 4 ರೀತಿಯ ತ್ಯಾಜ್ಯ ವಿಂಗಡಣೆ, ಮನೆಯಲ್ಲೇ ಕಾಂಪೋಸ್ಟಿAಗ್, ಏಕಬಳಕೆಯ ಪ್ಲಾಸ್ಟಿಕ್ ನಿಷೇಧ, ‘ಏಕ್ ಪೇಡ್ ಮಾ ಕೆ ನಾಮ್’ ಅಡಿಯಲ್ಲಿ ಸಸಿ ನೆಡುವುದು ಹಾಗೂ ಕ್ರೀಡೆಗಳ ಮೂಲಕ ಸ್ವಚ್ಛತೆಯ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆಯನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಂಡು ಜಿಲ್ಲೆಯನ್ನು ಸ್ವಚ್ಛ ಹಾಗೂ ಮಾದರಿ ಜಿಲ್ಲೆಯನ್ನಾಗಿ ಮಾಡಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಅಬ್ದುಲ್ ರೆಹಮಾನ್ ಸೇರಿದಂತೆ ವಿವಿಧ ನಗರ ಸ್ಥಳೀಯ-ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.





