37.6 C
Bellary
Sunday, April 14, 2024

Localpin

spot_img

ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಆಗ್ರಹ

ಬೆಳಗಾಯಿತು ವಾರ್ತೆ
ಬಳ್ಳಾರಿ: ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಂಬಂಧಪಟ್ಟ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸುವುದರ ಜೊತೆಗೆ ಮುಂಬರುವ ದಿನಗಳಲ್ಲಿ ನಮ್ಮಿಂದಾಗುವ ಸಹಾಯ, ಸಹಕಾರವನ್ನು ಸಹ ಮಾಡಲಾಗುವುದು ಎಂದು ಉದ್ಯಮಿ ಜೋಳದರಾಶಿ ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಹಂದಿಹಾಳು ಗ್ರಾಮದ ಶ್ರೀ ಮಹಾದೇವ ತಾತನವರ ಮಠದ ಆವರಣದಲ್ಲಿ ಕಸಾಪ ದತ್ತಿ ಕಾರ್ಯಕ್ರಮ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್, ಪೆನ್ನು ಮತ್ತು ಕಂಪ್ಯೂಟರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ನೋಡಿದರೆ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳೇ ಇಲ್ಲ. ಶಾಲಾ ಕಟ್ಟಡ ದುರಸ್ತಿಗೆ ಬಂದಿದೆ. ಕಟ್ಟಡವೊಂದರ ಮೇಲ್ಛಾವಣಿ ಕುಸಿದಿದೆ. ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೇರಿಸಿ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಪ್ರೌಢಶಾಲೆಗೆ ಸಮರ್ಪಕ ಸಿಬ್ಬಂದಿಗಳನ್ನು ನಿಯೋಜಿಸಿಲ್ಲ. ಮುಂದಿನ ದಿನಗಳಲ್ಲಿ ಸೌಲಭ್ಯ ವಂಚಿತ ಶಾಲೆಗಳಿಗೆ ನನ್ನಿಂದಾಗುವ ಸಹಕಾರ ನೀಡಲಾಗುವುದು. ಜೊತೆಗೆ ಸರ್ಕಾರದಿಂದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿಗೆ ತೆರಳಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರುಹಂದಿಹಾಳು ತರಗತಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆ ಎಂದು ಆತಂಕಕ್ಕೆ ಒಳಗಾಗಬಾರದು. ಚೆನ್ನಾಗಿ ಅಭ್ಯಾಸ ಮಾಡಿ, ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಬೇಕು. ನಾನು ಸಹ ಅತ್ಯಂತ ಕಡುಬಡತನದಿಂದ ಬಂದಿದ್ದೇನೆ. ನಾನು ಹತ್ತನೇ ತರಗತಿ ಪರೀಕ್ಷೆ ಬರೆಯಲು ನನ್ನ ಬಳಿಯೂ ಪ್ಯಾಡ್ ಇರಲಿಲ್ಲ. ಹಾಗಂತ ಸದ್ಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ಯಾಡ್ ಖರೀದಿಸುವಷ್ಟು ಸಾಮರ್ಥ್ಯವಿಲ್ಲ ಅಂತಲ್ಲ. ನಾವೆಲ್ಲ ಸರ್ಕಾರಿ ಶಾಲೆಯಲ್ಲಿ ಓದಿದ್ದರಿಂದ ಸರ್ಕಾರಿ ಶಾಲೆಯಲ್ಲಿನ ಬಡ ವಿದ್ಯಾರ್ಥಿಗಳಿಗೆ ನಮ್ಮಿಂದಾಗುವ ಅಳಿಲು ಸೇವೆ ಮಾಡೋಣ ಅಂತ ಪರೀಕ್ಷಾ ಪ್ಯಾಡ್, ಪೆನ್ನು ವಿತರಿಸುತ್ತಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಶಶಿಧರ ಮೇಟಿ ಮಾತನಾಡಿ, ಕನ್ನಡ ಭಾಷೆ, ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆ ಎಂದು ಹಿಂಜರಿಕೆ, ಕೀಳರಿಮೆ ಬೇಡ. ನಾವೆಲ್ಲ ಕನ್ನಡ ಮಾಧ್ಯಮದಲ್ಲೇ ಓದಿ, ಕನ್ನಡ ಪತ್ರಿಕೋದ್ಯಮದಲ್ಲಿ ವರದಿಗಾರರಾಗಿ ಕೆಲಸ ಮಾಡುವ ಮೂಲಕ ಕನ್ನಡದಿಂದಲೇ ಬದುಕು ಕಟ್ಟಿಕೊಟ್ಟಿದ್ದೇವೆ. ನಮ್ಮ ಉಸಿರು ಕನ್ನಡವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಹಿರಿಯ ಕಲಾವಿದ ಪುರುಷೋತ್ತಮ ಹಂದ್ಯಾಳು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದರಲ್ಲೂ ಕಮ್ಮಿಯಿಲ್ಲ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಗ್ರಾಮೀಣ ಹಿರಿಮೆಯನ್ನು ಎತ್ತಿಹಿಡಿಯಬೇಕು ಎಂದು ಕಿವಿಮಾತು ಹೇಳಿದರು.
ಸಾಧನೆ ಮಾಡಲು ಯಾವುದೇ ಸಮಸ್ಯೆಗಳು ಅಡ್ಡಿಯಾಗಲ್ಲ. ಮನೆಗಳಲ್ಲಿ ಹಲವಾರು ಸಮಸ್ಯೆಗಳು ಸಹಜ. ನಿಮ್ಮ ತಂದೆ ಅದನ್ನು ಕೊಣಿಸಿಲ್ಲ. ಇದನ್ನು ತಂದುಕೊಟ್ಟಿಲ್ಲ ಎಂಬುದು ಮುಖ್ಯವಲ್ಲ. ನಿಮ್ಮ ತಂದೆ-ತಾಯಿ ನಿಮ್ಮನ್ನು ಶಾಲೆಗೆ ಕಳುಹಿಸಿದ್ದಾರೆ. ಅದೇ ಮುಖ್ಯ. ಶಾಲೆಯಲ್ಲಿ ಹೇಗೆ ಓದಬೇಕು. ಬದುಕು ರೂಪಿಸಿಕೊಳ್ಳಬೇಕು ಎಂಬುದು ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.
ಬಳಿಕ ಹಂದಿಹಾಳ್, ಬೆಣಕಲ್, ಸಿಂಧವಾಳ, ಶ್ರೀಧರಗಡ್ಡೆ, ಕೊರ್ಲಗುಂದಿ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್, ಪೆನ್ನುಗಳನ್ನು ಉದ್ಯಮಿ ಜೋಳದರಾಸಿ ತಿಮ್ಮಪ್ಪ, ಪತ್ರಕರ್ತ ಶಶಿಧರ ಮೇಟಿ ಸೇರಿ ಹಲವರು ವಿತರಿಸಿದರು. ಶಿಕ್ಷಕಿ ಜಿ.ಪಿ.ಭಾರತಿ ಹಂದ್ಯಾಳು ಅವರು ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದರು.
ಶಾಲೆಯ ಶಿಕ್ಷಕ, ಸಾಹಿತಿ ಕೆ.ಶಿವಲಿಂಗಪ್ಪ ಹಂದ್ಯಾಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ದುರುಗಣ್ಣ, ಬೆಣಕಲ್ ಬಸವರಾಜ, ಪುರುಷೋತ್ತಮ ಹಂದ್ಯಾಳು, ಶ್ರೀಧರ್, ಅಶೋಕ್‌ಗೌಡ, ಭೀಮೇಶ್ ಸ್ವಾಮಿ, ಸಿಆರ್‌ಪಿ ರವಿಚಂದ್ರ ಸೇರಿ ಹಲವರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles