ಜನಾರ್ದನ ರೆಡ್ಡಿ ಹೇಳಿಕೆಗೆ ಭರತ್ ರೆಡ್ಡಿ ತಿರುಗೇಟು: 2028ರ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ

ಬೆಳಗಾಯಿತು ವಾರ್ತೆ
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಭಗವದ್ಗೀತೆಯ ಉಲ್ಲೇಖದೊಂದಿಗೆ ತಿರುಗೇಟು ನೀಡಿದರು.
ಯುದ್ಧದ ಕುರಿತು ಮುಂಚಿತವಾಗಿಯೇ ಮಾತನಾಡಬಾರದು. ರಣರಂಗದಲ್ಲಿ ಯಾರು ರಣಹೇಡಿಗಳು ಎಂಬುದು ಮುಂದೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
2028ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜನರೇ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ. ಜನರ ತೀರ್ಪೇ ಅಂತಿಮವಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಯಾರು ಏನು ಎಂಬುದು ಜನರಿಗೆ ತಿಳಿಯಲಿದೆ ಎಂದು ಭರತ್ ರೆಡ್ಡಿ ತಿಳಿಸಿದರು.
ಸಾವಿರ ಮಾತುಗಳಿಗೆ ಒಂದೇ ಉತ್ತರ ಸಿಗಲಿದೆ. ಆ ಉತ್ತರವನ್ನು ಜನರೇ ನೀಡಲಿದ್ದಾರೆ. ಸದ್ಯ ತಮ್ಮ ಗಮನ ಬಳ್ಳಾರಿ ನಗರದ ಅಭಿವೃದ್ಧಿಯತ್ತ ಮಾತ್ರವಿದ್ದು, ಇಂತಹ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಾವಿರ ಮಾತುಗಳಿಗೆ ಒಂದೇ ಉತ್ತರ ಸಿಗಲಿದೆ. ಅದು ಜನರ ಬಾಯಿಂದಲೇ ಬರಲಿದೆ. ಜನರ ಮನಸ್ಸು ಗೆಲ್ಲುವುದೇ ತಮ್ಮ ಗುರಿಯಾಗಿದ್ದು, ಬಳ್ಳಾರಿಯ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುವುದಾಗಿ ಭರತ್ ರೆಡ್ಡಿ ಸ್ಪಷ್ಟಪಡಿಸಿದರು.
ದೊಡ್ಡ ಮಟ್ಟದಲ್ಲಿ ವಾಲ್ಮೀಕಿ ಪುತ್ಥಳಿ ಉದ್ಘಾಟನೆ
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯನ್ನು ದೊಡ್ಡ ಮಟ್ಟದಲ್ಲಿ ಉದ್ಘಾಟನೆ ಮಾಡುವುದಾಗಿ ಶಾಸಕ ಭರತ್ ರೆಡ್ಡಿ ತಿಳಿಸಿದರು. ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಈ ಕುರಿತು ಮುಹೂರ್ತ ನಿಗದಿಪಡಿಸಲಾಗುವುದು ಎಂದರು.
ಇಷ್ಟು ವರ್ಷಗಳಿಂದ ನಗರದಲ್ಲಿ ನಿರೀಕ್ಷಿತ ಮಟ್ಟದ ನಗರಾಭಿವೃದ್ಧಿ ಆಗಿಲ್ಲ. ಇನ್ನು ಮುಂದೆ ಅಭಿವೃದ್ಧಿ ಹೊಂದಿದ ಬಳ್ಳಾರಿಯನ್ನು ಜನರು ನೋಡಲಿದ್ದಾರೆ. ಬಳ್ಳಾರಿಯ ಅಭಿವೃದ್ಧಿ ಮಾಡುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಜನರಿಗೆ ತೊಂದರೆ ನೀಡಿದರೆ ಕ್ರಮದ ಎಚ್ಚರಿಕೆ:
ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಗುರುವಾರ ಬೆಳಿಗ್ಗೆ ಬಳ್ಳಾರಿ ತಾಲೂಕು ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಂತಹ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳು ಅಧಿಕಾರಿಗಳು ಜನರ ನಡುವೆ ಇದ್ದುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ. ಸರ್ಕಾರದ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಯಾವ ರೀತಿ ಜನರ ಮನೆಗಳಿಗೆ ತೆರಳಿ ಅವರನ್ನು ಭೇಟಿ ಮಾಡುತ್ತಾರೋ, ಅದೇ ರೀತಿಯಲ್ಲಿ ಅಧಿಕಾರಿಗಳೂ ಜನರ ಬಳಿಗೆ ತೆರಳಿ ಸೇವೆ ನೀಡಬೇಕು ಎಂದು ಭರತ್ ರೆಡ್ಡಿ ಹೇಳಿದರು.
ಪಿಂಚಣಿ ವಿಳಂಬದ ಬಗ್ಗೆ ಪರಿಶೀಲನೆ
ತಾಲೂಕು ಕಚೇರಿಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಅಲ್ಲದೆ ಸರ್ವರ್ ಸಮಸ್ಯೆಯೂ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಈ ಕುರಿತು ಪರಿಶೀಲನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಮುಂದೆ ಎರಡು ದಿನಕ್ಕೊಮ್ಮೆ ತಾಲೂಕು ಕಚೇರಿಗೆ ಭೇಟಿ ನೀಡುವುದಾಗಿ ಹೇಳಿದ ಶಾಸಕ, ತಾಲೂಕು ಕಚೇರಿ ಮಾತ್ರವಲ್ಲದೆ ವಿವಿಧ ಸರ್ಕಾರಿ ಕಚೇರಿಗಳಿಗೂ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸುವುದಾಗಿ ಹೇಳಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಸೇವೆ ಮಾಡಬೇಕು. ಜನರಿಗೆ ಅನಗತ್ಯ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಅಮಾನತುಗೊಳಿಸುವುದಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ರೇಖಾ ಸೇರಿದಂತೆ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles