ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಹೊರವಲಯದ ಪಿ.ಡಿ ಹಳ್ಳಿ ಭಾಗದಲ್ಲಿ ನಡೆದ ಪ್ಯಾರಚೂಟ್ ತರಬೇತಿ ವೇಳೆ ಅಪಘಾತ ಸಂಭವಿಸಿ ಇಬ್ಬರು ಸೈನಿಕರು ಗಾಯಗೊಂಡ ಘಟನೆ ವರದಿಯಾಗಿದೆ.
ತರಬೇತಿ ಜಿಗಿತದ ಸಂದರ್ಭದಲ್ಲಿ ಸುಮಾರು 50 ಅಡಿ ಎತ್ತರದಿಂದ ಕೆಳಗೆ ಬಿದ್ದ ಪರಿಣಾಮ ಚಿನ್ನರಾಜ್ (25) ಸೇರಿದಂತೆ ಮತ್ತೊಬ್ಬ ಸೇನಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ. ಇವರಲ್ಲಿ ಒಬ್ಬರ ಕಾಲಿನ ಮೂಳೆ ಮುರಿದಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಈ ತರಬೇತಿಯಲ್ಲಿ ಒಟ್ಟು 417 ಸೈನಿಕರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಅಪಘಾತ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆ, ಇಬ್ಬರನ್ನೂ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





