ಬೆಳಗಾಯಿತು ವಾರ್ತೆ
ಬಳ್ಳಾರಿ: ಬಾಲಕಿಯರಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಆತ್ಮರಕ್ಷಣಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ಕರಾಟೆ ಶಿಕ್ಷಕರ ಸಂಘ (ರಿ.), ಕರಾಟೆ ಕರ್ನಾಟಕ ಹಾಗೂ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 29ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬಾಲಕಿಯರ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕಟ್ಟೇಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬಾಲಕಿಯರಿಗಾಗಿ ವಿಶೇಷವಾಗಿ ‘ನಾರಿ ಶಕ್ತಿ–ರಾಜ್ಯ ಮಟ್ಟದ ಬಾಲಕಿಯರ ಕರಾಟೆ ಪಂದ್ಯಾವಳಿ-2026’ ಎಂಬ ವಿನೂತನ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದರು.
ನವೆಂಬರ್ 29ರಂದು ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಗರದ ಅಲ್ಲಿಪುರ, ಹೊಸಪೇಟೆ ರಸ್ತೆಯಲ್ಲಿರುವ ಬಳ್ಳಾರಿ ರೆಸಿಡೆನ್ಷಿಯಲ್ ಸ್ಕೂಲ್ ಆ್ಯಂಡ್ ಕಾಲೇಜಿನ ಆವರಣದ ಕಲಾಕ್ಷೇತ್ರ ಸಭಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ರಾಜ್ಯದ ಸುಮಾರು 27 ಜಿಲ್ಲೆಗಳ ಕರಾಟೆ ಶಿಕ್ಷಕರ ಸಂಘದ ಸದಸ್ಯತ್ವ ಹೊಂದಿರುವ ವಿದ್ಯಾರ್ಥಿನಿಯರು ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಿಂದ 700ರಿಂದ 800 ಬಾಲಕಿಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸಾಮಾನ್ಯ ಕರಾಟೆ ಪಂದ್ಯಾವಳಿಗಳಿಗಿಂತ ಭಿನ್ನವಾಗಿ ಬಾಲಕಿಯರ ಪ್ರತಿಭೆ, ಸಾಮರ್ಥ್ಯ ಹಾಗೂ ಆತ್ಮರಕ್ಷಣೆಯ ಮಹತ್ವಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ‘ನಾರಿ ಶಕ್ತಿ–ಸಬಲ ಹೆಣ್ಣು, ಸುರಕ್ಷಿತ ಸಮಾಜ’ ಎಂಬ ಧ್ಯೇಯವಾಕ್ಯದೊಂದಿಗೆ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದರ ಜತೆಗೆ ಕರಾಟೆ ಕ್ರೀಡೆಯಲ್ಲಿ ಬಾಲಕಿಯರ ಸಾಧನೆಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.
ಪಂದ್ಯಾವಳಿಯಲ್ಲಿ ವಯೋಮಿತಿ ಮತ್ತು ತೂಕದ ಆಧಾರದ ಮೇಲೆ ಕಟಾ (Kata) ಹಾಗೂ ಕುಮಿಟೆ (Kumite) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಮೂಲಕ ಬಾಲಕಿಯರಲ್ಲಿ ಆತ್ಮವಿಶ್ವಾಸ ಮತ್ತು ಸ್ವಯಂ ರಕ್ಷಣೆಯ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಮೊಹಮ್ಮದ್ ನದೀಮ್, ಜಿಲ್ಲಾ ಅಧ್ಯಕ್ಷ ಸುರೇಶ್, ರಿಜ್ವಾನ್, ಪ್ರಸಾದ್, ಹನುಮಂತ, ರವಿ ಕೋಟ್ಯಾನ್, ಪ್ರಶಾಂತ್, ನಂದೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.





