ಬೆಳಗಾಯಿತು ವಾರ್ತೆ
ಬಳ್ಳಾರಿ: ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಬಲಪಡಿಸಲು ಕೆ.ಎಂ.ಇ.ಆರ್.ಸಿ ಅನುದಾನದಡಿ ಸುಮಾರು 75 ಕೋಟಿಯಿಂದ 100 ಕೋಟಿ ರೂ. ಗೂ ಅಧಿಕ ಹಣವನ್ನು ಒದಗಿಸಲಾಗುತ್ತಿದ್ದು, ಡಿ.ಎಂ.ಎಫ್ ನಿಧಿಯ ಮೂಲಕವೂ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ‘ನಾಡ ಹಬ್ಬದ ಸಡಗರ – ಕ್ರೀಡೆಯ ಸಂಭ್ರಮ!’ ಧ್ಯೇಯದೊಂದಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ‘ದಸರಾ ಕ್ರೀಡಾಕೂಟ ಹಾಗೂ ಸಿ.ಎಂ. ಕಪ್ 2026’ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು ಹಾಗೂ 2014ರಲ್ಲಿ ಜೆಎಸ್ಡಬ್ಲ್ಯೂ ಸಹಯೋಗದೊಂದಿಗೆ ಬಿಡಿಎಎ ಮೈದಾನ ನಿರ್ಮಾಣಗೊಂಡಿವೆ. ಡಿಎಂಎಫ್ ವತಿಯಿಂದ ಸಿರುಗುಪ್ಪದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಕೆಕೆಆರ್ಡಿಬಿ ವತಿಯಿಂದ 7 ಕೋಟಿ ರೂ. ವೆಚ್ಚದಲ್ಲಿ ಕಂಪ್ಲಿ ಮತ್ತು ಕುರುಗೋಡಿನಲ್ಲಿ ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಕೆಎಂಆರ್ಸಿ ವತಿಯಿಂದ ಬಳ್ಳಾರಿ ಹಾಗೂ ಸಿರುಗುಪ್ಪದಲ್ಲಿ 27 ಕೋಟಿ ಮತ್ತು ಸಂಡೂರಿನಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕ್ರೀಡಾ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು.
ಏಷ್ಯನ್ ಗೇಮ್ಸ್, ಪ್ಯಾರಾ ಒಲಿಂಪಿಕ್ಸ್ ಸೇರಿದಂತೆ ವಿವಿಧ ಹಂತಗಳಲ್ಲಿ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳಿಗೆ ಇಲಾಖೆಯಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸಾಂಕೇತಿಕವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಜಿಲ್ಲಾಧಿಕಾರಿಯವರು, ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ದೀಪ ಬೆಳಗಿಸಿದರು. ಬಳಿಕ ಕ್ರೀಡಾಕೂಟಗಳು ನಡೆದವು. ಕ್ರೀಡಾಪಟುಗಳಿಗೆ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಫುಟ್ ಬಾಲ್ ಅಸೋಶಿಯೇಶನ್ ನ ನಿರಂಜನ್, ಭಾರತೀಯ ಸೇವಾದಳದ ಗಣೇಶ್ ಬಾರೀಕರ ಸೇರಿದಂತೆ ಕ್ರೀಡಾಪಟುಗಳು ಹಾಗೂ ಇತರರು ಇದ್ದರು.





