ದೇವಸ್ಥಾನಗಳ ಹುಂಡಿಗಳಿಗೆ 360 ಡಿಗ್ರಿ ಸಿಸಿಟಿವಿ ನಿಗಾ ಕಡ್ಡಾಯ


ಬೆಳಗಾಯಿತು ವಾರ್ತೆ| Www.belagayithu.in
ಬಳ್ಳಾರಿ: ಜಿಲ್ಲೆಯ ಎಲ್ಲಾ ದೇವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಸಮರ್ಪಕ ಭದ್ರತೆ ಒದಗಿಸುವ ಉದ್ದೇಶದಿಂದ 360 ಡಿಗ್ರಿ ಸಿಸಿಟಿವಿ ನಿಗಾ ವ್ಯವಸ್ಥೆ ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎನ್. ಮಹಮ್ಮದ್ ಝುಬೇರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೇವಸ್ಥಾನಗಳ ಹುಂಡಿ ಭದ್ರತೆ ಕುರಿತು ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 713 ದೇವಾಲಯಗಳ ಪೈಕಿ 354 ದೇವಾಲಯಗಳಲ್ಲಿ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆ ಪೂರ್ಣಗೊಂಡಿದ್ದು, ಉಳಿದ ದೇವಾಲಯಗಳಲ್ಲೂ ಶೀಘ್ರವೇ ನಿಗಾ ವ್ಯವಸ್ಥೆ ಅಳವಡಿಸಬೇಕು ಎಂದು ನಿರ್ದೇಶಿಸಿದರು.
ಹುಂಡಿ ಎಣಿಕೆ ಕಾರ್ಯ ಸಂಪೂರ್ಣವಾಗಿ ಸಿಸಿಟಿವಿ ಕಣ್ಣಾವಲಿನಲ್ಲಿ ನಡೆಯಬೇಕು. ಕಳ್ಳತನ ಹಾಗೂ ಇತರೆ ಅಕ್ರಮಗಳನ್ನು ತಡೆಯಲು ಡಿಜಿಟಲ್ ನಿಗಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಹುಂಡಿ ಎಣಿಕೆ ಕಾರ್ಯದಲ್ಲಿ ಸರ್ಕಾರಿ ನೌಕರರಿಗೆ ಮಾತ್ರ ಅವಕಾಶ ನೀಡಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ರಚಿಸಿ, ಪ್ರತಿ 15 ದಿನಗಳಿಗೊಮ್ಮೆ ಸಂಬಂಧಿತ ಅಧಿಕಾರಿಗಳು ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ಹುಂಡಿ ಎಣಿಕೆ ವೇಳೆ ಯಾವುದೇ ಕಳ್ಳತನ ಅಥವಾ ಅಕ್ರಮ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿತ ದೇವಾಲಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕಾಣಿಕೆ ಸ್ವೀಕರಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬೇಕು. ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ನಡೆಯುತ್ತಿರುವ ಸಿಸಿಟಿವಿ ಮಾನಿಟರಿಂಗ್ ಕಾಮಗಾರಿಯನ್ನು ಏಳು ದಿನಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ದೇವಾಲಯಗಳ ಸೂಕ್ತ ಸ್ಥಳಗಳಲ್ಲಿ ಎಲ್ಲರಿಗೂ ಗೋಚರಿಸುವ ರೀತಿಯಲ್ಲಿ ಹುಂಡಿಗಳನ್ನು ಅಳವಡಿಸಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
ಜಿಲ್ಲೆಯಲ್ಲಿ 5 ‘ಎ’ ವರ್ಗ, 5 ‘ಬಿ’ ವರ್ಗ ಹಾಗೂ 703 ‘ಸಿ’ ವರ್ಗ ಸೇರಿ ಒಟ್ಟು 713 ದೇವಾಲಯಗಳಿದ್ದು, ಎಲ್ಲೆಡೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles