ಬೆಳಗಾಯಿತು ವಾರ್ತೆ / https://belagayithu.in
ಬೆಂಗಳೂರು : ಸ್ಪಂದನಶೀಲ ಆಡಳಿತದ ಭರವಸೆಯನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಅಂದರೆ ಗುರುವಾರ (ಫೆಬ್ರವರಿ 8) ಇದೇ ಮೊದಲ ಬಾರಿಗೆ ವಿಧಾನಸೌಧ ಮುಂಭಾಗದಲ್ಲಿ ರಾಜ್ಯ ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮ ನಡೆಸಲಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಈ ಜನತಾ ದರ್ಶನ ನಡೆಯಲಿದೆ. ಜನಸಾಮಾನ್ಯರ ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಪ್ರಯತ್ನದೊಂದಿಗೆ ರಾಜ್ಯ ಮಟ್ಟದ ಈ ಜನತಾ ದರ್ಶನವನ್ನು ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗ ನಡೆಸುತ್ತಿರುವುದು ವಿಶೇಷವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ನಡೆಸುತ್ತಿರುವ 2ನೇ ಜನಸ್ಪಂದನ ಕಾರ್ಯಕ್ರಮ ಇದಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮೊದಲ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ್ದರು.
1902 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ
ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಜನಸ್ಪಂದನ ಕಾರ್ಯಕ್ರಮದ ಸ್ಥಳದಲ್ಲೇ ಇರುವಂತೆ ಈಗಾಗಲೇ ಸಿಎಂ ಸೂಚನೆ ನೀಡಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಸಿಎಂ ಬಳಿ ಹೇಳಿಕೊಳ್ಳಲು ಅಧಾರ್ ಅಥವಾ ಪಡಿತರ ಕಾರ್ಡ್ ನೊಂದಿಗೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕು. ಹಾಗೇ ಅನ್ ಲೈನ್ ನಲ್ಲೂ ನೋಂದಾಣಿ ಮಾಡಿಕೊಳ್ಳಬಹುದು. 1902 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಬಹುದು.