ಬಳ್ಳಾರಿ: ಆ.23ರಂದು ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಗರದ ಜೈಲ್ ಗೋಡೆ ಹಿಂಭಾಗದ ರಸ್ತೆಯಲ್ಲಿ ಕೆಎಸ್ ಆರ್ ಟಿ ಸಿ ಸೆಕ್ಯೂರಿಟಿ ಇನ್ಸ್ಪೆಕ್ಟರ್ ಹುಸೇನಪ್ಪ ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕರಾಟೆ ತರಬೇತುದಾರ ಕಟ್ಟೇಸ್ವಾಮಿ ಮತ್ತು ಮಾನಪ್ಪ ಅವರನ್ನು ಗಾಂಧಿ ನಗರದ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ರಂಜಿತ್ ಕುಮಾರ್ ಭಂಡಾರು ಅವರು ತಿಳಿಸಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾಟೆ ತರಬೇತುದಾರ ಕಟ್ಟೇಸ್ವಾಮಿ ಅವರು ಹುಸೇನಪ್ಪ ಅವರಿಗೆ ಆರು ತಿಂಗಳ ಹಿಂದೆ 2ಲಕ್ಷ 50ಸಾವಿರ ಹಣ ಸಾಲವಾಗಿ ನೀಡಿದ್ದು ಹಣ ಹಿಂದಿರುಗಿಸಲು ಹುಸೇನಪ್ಪ ಅವರನ್ನು ಕೇಳಿದಾಗ ಕಟ್ಟೇಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಇದರಿಂದ ಮನನೊಂದ ಕಟ್ಟೇಸ್ವಾಮಿ ಅವರು ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಬೇರೆ ಬೇರೆ ಆಯಾಮಗಳಲ್ಲಿ ಸಹ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.
*ಆನ್ ಲೈನ್ ಫ್ರಾಡ್ ಪ್ರಕರಣ ತಡೆಯಲು ವಿಡಿಯೋಗಳ ಮೂಲಕ ಜಾಗೃತಿ*
ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಯಲ್ಲಿನ ಹಣ ದೋಚುವ ಆನಲೈನ್ ಫ್ರಾಡ್ ಪ್ರಕರಣಗಳು ಹೆಚ್ಚಾಗುತ್ತಿವೆ.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರುಗಳು ಸಹ ದಾಖಲಾಗಿವೆ ಇದಕ್ಕೆ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಸೈಬರ್ ಕ್ರೈಂ ಆನ್ ಲೈನ್ ಫ್ರಾಡ್ ಪ್ರಕರಣಗಳು ತಡೆಯಲು ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಹಾನಗರ ಪಾಲಿಕೆಯ ವಾಹನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.