ಬೆಳಗಾಯಿತು ವಾರ್ತೆ
ಬೆಂಗಳೂರು: ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದ್ದು, ಕ್ಷೇತ್ರವಾರು ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಿ ಕರಡು ಗೆಜೆಟ್ ಅಧಿಸೂಚನೆಯನ್ನು ಸಿದ್ಧಪಡಿಸಿದೆ.
ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ಒಟ್ಟು 1,129 ಸ್ಥಾನಗಳ ಪೈಕಿ ಅನುಸೂಚಿತ ಜಾತಿಗೆ (ಎಸ್ಸಿ) 225, ಅನುಸೂಚಿತ ಪಂಗಡಕ್ಕೆ (ಎಸ್ಟಿ) 102, ಹಿಂದುಳಿದ ವರ್ಗ ‘ಅ’ಕ್ಕೆ 183, ಹಿಂದುಳಿದ ವರ್ಗ ‘ಬ’ಕ್ಕೆ 43 ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಒಟ್ಟು 571 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಜಿಲ್ಲಾ ಪಂಚಾಯಿತಿ ಮೀಸಲಾತಿಯಲ್ಲಿ ಎಸ್ಸಿ 225 ಸ್ಥಾನಗಳ ಪೈಕಿ 121, ಎಸ್ಟಿ 102ರಲ್ಲಿ 59, ಹಿಂದುಳಿದ ವರ್ಗ ‘ಅ’ದ 183ರಲ್ಲಿ 98, ಹಿಂದುಳಿದ ವರ್ಗ ‘ಬ’ದ 43ರಲ್ಲಿ 25 ಹಾಗೂ ಸಾಮಾನ್ಯ ವರ್ಗದ 576ರಲ್ಲಿ 268 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ತಾಲೂಕು ಪಂಚಾಯಿತಿಗೂ ಮೀಸಲಾತಿ
ರಾಜ್ಯದ 31 ಜಿಲ್ಲೆಗಳ ತಾಲೂಕು ಪಂಚಾಯಿತಿಗಳ ಒಟ್ಟು 3,656 ಸ್ಥಾನಗಳಲ್ಲಿ ಎಸ್ಸಿಗೆ 733, ಎಸ್ಟಿಗೆ 394, ಹಿಂದುಳಿದ ವರ್ಗ ‘ಅ’ಕ್ಕೆ 508, ಹಿಂದುಳಿದ ವರ್ಗ ‘ಬ’ಕ್ಕೆ 111 ಹಾಗೂ ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ತಾಲೂಕು ಪಂಚಾಯಿತಿ ಮೀಸಲಾತಿಯಲ್ಲಿ ಎಸ್ಸಿ 733 ಸ್ಥಾನಗಳ ಪೈಕಿ 429, ಎಸ್ಟಿ 394ರಲ್ಲಿ 287, ಹಿಂದುಳಿದ ವರ್ಗ ‘ಅ’ದ 508ರಲ್ಲಿ 306, ಹಿಂದುಳಿದ ವರ್ಗ ‘ಬ’ದ 111ರಲ್ಲಿ 64 ಹಾಗೂ ಸಾಮಾನ್ಯ ವರ್ಗದ 1,910ರಲ್ಲಿ 819 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರ ಅಡಿಯಲ್ಲಿ ಸರ್ಕಾರ ಈ ಮೀಸಲಾತಿ ನಿಗದಿ ಮಾಡಿದೆ. ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿ, ಹೊಸ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕರಡು ಅಧಿಸೂಚನೆ ಪ್ರಕಟವಾದ ಬಳಿಕ ಆಕ್ಷೇಪಣೆ ಹಾಗೂ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.





