ಬೆಳಗಾಯಿತು ವಾರ್ತೆ
ಹೊಸದಿಲ್ಲಿ: ಸಿಜೆಪಿ ಪ್ರತಿಭಟನೆ ಹಿನ್ನೆಲೆ ಅಭಿಜೀತ್ ದೀಪ್ಕೆ ಸಹಿತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ. ನಾವು ಮೋದಿಯ ಸಂಪೂರ್ಣ ಸರ್ವಾಧಿಕಾರದ ಆಡಳಿತದಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಮಾನದಿಂದ ಇಳಿಯುತ್ತಿದ್ದಂತೆಯೇ ಸಿಜೆಪಿ ನಾಯಕರನ್ನು ಬಂಧಿಸಿರುವುದು ಆಡಳಿತದಲ್ಲಿರುವವರ ಅಭೂತಪೂರ್ವ ಭಯವನ್ನು ಪ್ರತಿಬಿಂಬಿಸುತ್ತದೆ.
ಮತಗಳ್ಳತನದ ಮೂಲಕವೇ ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂಬುದು ಪ್ರಧಾನಿ ಮೋದಿ ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಹೀಗಾಗಿ, ತಮ್ಮ ವಂಚನೆ ಬಹಿರಂಗವಾಗದಿರಲು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಅವರು ಪಣತೊಟ್ಟಿದ್ದಾರೆ. ಜ್ಞಾನೇಶ್ ಕುಮಾರ್ ಮತ್ತು ಮೋದಿ ಅವರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಭಿಜೀತ್ ದೀಪ್ಕೆ ಸಹಿತ ಸಿಜೆಪಿ ತಂಡವನ್ನು ವಶಕ್ಕೆ ಪಡೆದ ದಿಲ್ಲಿ ಪೊಲೀಸರು ಅವರನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.





