ಬೆಳಗಾಯಿತು ವಾರ್ತೆ
ಬಳ್ಳಾರಿ: ಹೆಂಡತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿತ್ಯ ಜಗಳವಾಡುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಳ್ಳಾರಿ ನಗರದ ಗುಗ್ಗರಹಟ್ಟಿಯಲ್ಲಿ ನಡೆದಿದೆ.
ಮೃತರನ್ನು ನಾಗಲಕ್ಷ್ಮೀ (24) ಹಾಗೂ ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ತೇಜಾ (29) ಹಾಗೂ ಆತನ ತಂದೆ ಗುರುಶಂಕರ್ (50) ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರೂ ದೋಬಿ (ಇಸ್ತ್ರಿ) ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ತೇಜಾ ತನ್ನ ಪತ್ನಿ ನಾಗಲಕ್ಷ್ಮೀ ಮೇಲೆ ಅನುಮಾನ ವ್ಯಕ್ತಪಡಿಸಿ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ರಾಜೀ ಪಂಚಾಯಿತಿ ನಡೆಸಲು ನಾಗಲಕ್ಷ್ಮೀ ಅವರ ತಂದೆ ಶ್ರೀನಿವಾಸ ಮನೆಗೆ ಬಂದಿದ್ದರು. ಈ ವೇಳೆ ಮಾತಿನ ಚಕಮಕಿ ತಾರಕಕ್ಕೇರಿ, ತೇಜಾ ಮತ್ತು ಆತನ ತಂದೆ ಸೇರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ನಾಗಲಕ್ಷ್ಮೀ ಹಾಗೂ ಶ್ರೀನಿವಾಸ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಘಟನೆಯಿಂದ ಗುಗ್ಗರಹಟ್ಟಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.





