ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಚಿಂತನೆಗಳು ದೇಶಕ್ಕೆ ದಾರಿದೀಪ: ವಿಶ್ವೇಶ್ವರ ಭಟ್
ಬೆಳಗಾಯಿತು ವಾರ್ತೆ
ಬೆಂಗಳೂರು, ಅ.6: ಭಾರತದ ಆರ್ಥಿಕತೆ, ಸಾಮಾಜಿಕ ಸುಧಾರಣೆ, ಶಿಕ್ಷಣ, ರಾಜಕೀಯ ಹಾಗೂ ವಿದೇಶಾಂಗ ನೀತಿಗಳಲ್ಲಿನ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ ಪರಿಹಾರ ಸೂಚಿಸಿದ ನಿಜವಾದ ರಾಷ್ಟ್ರಚಿಕಿತ್ಸಕ ಡಾ. ಬಿ.ಆರ್. ಅಂಬೇಡ್ಕರ್ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಡಿ.ಎಸ್.ವಿ ಫೌಂಡೇಶನ್ ಆಯೋಜಿಸಿದ್ದ ಡಿ.ಎಸ್. ವೀರಯ್ಯ ವಿರಚಿತ ‘ರಾಷ್ಟ್ರಚಿಕಿತ್ಸಕ ಅಂಬೇಡ್ಕರ್’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ವೈದ್ಯರು ದೇಹದ ಅಂಗಾಂಗಗಳನ್ನು ಪರೀಕ್ಷಿಸಿ ರೋಗನಿರ್ಣಯ ಮಾಡುವಂತೆ, ಅಂಬೇಡ್ಕರ್ ಅವರು ಅಂದಿನ ಭಾರತೀಯ ಸಮಾಜದ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಸೂಚಿಸಿದರು. ಕೃತಿಯಲ್ಲಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ವಿಳಂಬವಾದ ಸಂದರ್ಭಗಳು ಹಾಗೂ ಚುನಾವಣೆಯಲ್ಲಿ ಸೋಲಿಸಲಾದ ಘಟನೆಗಳನ್ನು ದಾಖಲೆಗಳೊಂದಿಗೆ ವಿವರಿಸಲಾಗಿದೆ ಎಂದರು.
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಅಂಬೇಡ್ಕರ್ ಅಪರೂಪದ ಮಹಾನಾಯಕರಾಗಿದ್ದು, ಅವರ ಜ್ಞಾನ ಮತ್ತು ಸಾಧನೆಗಳು ಇಂದಿಗೂ ಪ್ರೇರಣಾದಾಯಕವಾಗಿವೆ ಎಂದರು. ವೀರಯ್ಯ ಅವರು ಕೃತಿಯಲ್ಲಿ ಅಂಬೇಡ್ಕರ್ ಅವರ ಪದವಿಗಳು ಹಾಗೂ ಸಾಧನೆಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವು ದಲಿತ ನಾಯಕರು, ಸಮಾಜ ಸುಧಾರಕರು ಹಾಗೂ ಗಣ್ಯರನ್ನು ಗೌರವಿಸಲಾಯಿತು. ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





