ಕ್ರೀಡೆಯಿಂದ ಸ್ನೇಹ, ಒಗ್ಗಟ್ಟು ವೃದ್ಧಿ: ಮೋತ್ಕರ್

ಛಾಯಾಗ್ರಾಹಕರ ದಸರಾ ಕ್ರಿಕೆಟ್ ಪಂದ್ಯಾವಳಿಗೆ ಶ್ರೀನಿವಾಸ್ ಮೋತ್ಕರ್ ಚಾಲನೆ
ಬೆಳಗಾಯಿತು ವಾರ್ತೆ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ಛಾಯಾಗ್ರಾಹಕರ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿರುವ ಮೂರು ದಿನಗಳ ದಸರಾ ಕ್ರಿಕೆಟ್ ಪಂದ್ಯಾವಳಿಗೆ ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಚಾಲನೆ ನೀಡಿ, ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಆಟಗಾರರಿಗೆ ಶುಭ ಹಾರೈಸಿದರು.

ಅ.14 ಮತ್ತು 15ರಂದು ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸುತ್ತಿವೆ. ಪ್ರತಿ ಪಂದ್ಯವನ್ನು 10 ಓವರ್‌ಗಳಿಗೆ ಸೀಮಿತಗೊಳಿಸಲಾಗಿದ್ದು, ದಿನಕ್ಕೆ ನಾಲ್ಕು ಪಂದ್ಯಗಳನ್ನು ನಡೆಸಲು ಆಯೋಜಕರು ಯೋಜಿಸಿದ್ದಾರೆ.

ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶ್ರೀನಿವಾಸ್ ಮೋತ್ಕರ್, ಛಾಯಾಗ್ರಾಹಕರು ತಮ್ಮ ವೃತ್ತಿಯ ಮೂಲಕ ಸಮಾಜದ ವಿವಿಧ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ವೃತ್ತಿಯ ಒತ್ತಡದ ನಡುವೆಯೂ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಕ್ರೀಡೆಯು ದೈಹಿಕ ಮತ್ತು ಮಾನಸಿಕ ಉಲ್ಲಾಸ ನೀಡುವುದರ ಜೊತೆಗೆ ಪರಸ್ಪರ ಸ್ನೇಹ, ಪ್ರೀತಿ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸುತ್ತದೆ. ಛಾಯಾಗ್ರಾಹಕರು ವೃತ್ತಿಗೆ ಸೀಮಿತವಾಗದೆ, ಕ್ರೀಡಾ ಚಟುವಟಿಕೆಗಳ ಮೂಲಕ ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿರುವ ಈ ಪಂದ್ಯಾವಳಿ ಎಲ್ಲರಲ್ಲೂ ಹೊಸ ಉತ್ಸಾಹ ಮೂಡಿಸಲಿ. ಏಳು ತಂಡಗಳ ಆಟಗಾರರು ಕ್ರೀಡಾಸ್ಫೂರ್ತಿಯಿಂದ ಆಟವಾಡಿ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಮನೋಭಾವವನ್ನು ಎತ್ತಿಹಿಡಿಯಬೇಕು ಎಂದು ಹಾರೈಸಿದರು. ಅಲ್ಲದೆ, ಪಂದ್ಯಾವಳಿಯ ಆಯೋಜಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಛಾಯಾಗ್ರಾಹಕ ನಾಗಲ್ಲಿ ವೀರೇಶ್ ಅವರ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಛಾಯಾಗ್ರಾಹಕರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎನ್. ಚಂದ್ರಮೋಹನ್, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ತಾಲೂಕು ಗೌರವಾಧ್ಯಕ್ಷ ಶೇಖ್ ಭಾಷಾ, ಕೆಇಬಿ ವೀರೇಶ್, ಹಿರಿಯ ಛಾಯಾಗ್ರಾಹಕರಾದ ನಾರಾಯಣಸ್ವಾಮಿ, ಸುಭಾನ್, ಶ್ರೀಧರ್, ರವಿಕುಮಾರ್, ಸ್ಪೆಕ್ಟ್ರಮ್ ಲ್ಯಾಬ್‌ನ ಶ್ಯಾಮ್, ಖಾದರ್, ಚಂದ್, ದುರುಗಣ್ಣ ಬಂಡಿಹಟ್ಟಿ, ಅಶೋಕ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಛಾಯಾಗ್ರಾಹಕರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles